ಹಾಸನ: ಹತ್ತು ವರ್ಷದ ಆಡಳಿತಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮನೆ ಮನೆಗೆ ತಲುಪಿಸಬೇಕೆಂಬ ಉದ್ದೇಶದಿಂದ ದೇಶಾದ್ಯಂತ ಗ್ರಾಮ ಚಲೋ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ ನಾಗೇಂದ್ರ ಅವರು ಹೇಳಿದರು.
ನಗರದ ಮಲ್ಲಿಗೆ ಹೋಟೆಲ್‌ನಲ್ಲಿ ಶುಕ್ರವಾರ ಗ್ರಾಮ ಚಲೋ ಅಭಿಯಾನದ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಫೆ. 9 ರಿಂದ 11ರ ವರೆಗೆ ಈ ಅಭಿಯಾನ ನಡೆಯಲಿದೆ. ಶನಿವಾರ ಮೈಸೂರಿಗೆ ಗೃಹ ಸಚಿವ ಅಮಿತ್ ಷಾ ಅವರು ಬರಲಿದ್ದು, ಲೋಕಸಭೆ ಚುನಾವಣೆಗೆ ಮೊದಲ ಸಭೆ ಆರಂಭವಾಗಲಿದೆ. ಲೋಕ ಕದನಕ್ಕೆ ದಿನಗಣನೆ ಶುರುವಾಗಿರುವುದರಿಂದ ಕಾರ್ಯಕರ್ತರು ಸಕ್ರಿಯರಾಗಿ ಕೆಲಸ ಮಾಡಬೇಕು ಎಂದರು.
ಗ್ರಾಮ ಚಲೋ ಅಭಿಯಾನಕ್ಕಾಗಿ ಎಲ್ಲಾ ಮಂಡಲ, ನಗರ ಪದಾಧಿಕಾರಿಗಳು ಶ್ರಮ ವಹಿಸಬೇಕು. ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯ ಸ್ಮರಣೆ ಅಂಗವಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿ ಮನೆ ಮನೆಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಮಾಹಿತಿ ತಲುಪಬೇಕು. 10 ವರ್ಷದಲ್ಲಿ ಪ್ರಧಾನಿ ಮೋದಿ ಅವರು ಸದೃಢ ದೇಶ ನಿರ್ಮಿಸಿದ್ದಾರೆ. ಕಾಂಗ್ರೆಸ್‌ನವರ ಟೊಳ್ಳು ಟೀಕೆಗಳಿಗೆ ಸಮರ್ಪಕ ಸ್ಪಷ್ಟನೆ ನೀಡಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಅರಿವನ್ನು ಎಲ್ಲರೂ ಹೊಂದಬೇಕು. ಫೆ. 17 ಮತ್ತು 18 ರಂದು ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದ್ದು, ಜಿಲ್ಲೆಯಲ್ಲಿ ಸಂಘಟನೆ ಚುರುಕಾಗಬೇಕು ಎಂದು ಸೂಚನೆ ನೀಡಿದರು.
ಕೇಂದ್ರದ ಯೋಜನೆಗಳನ್ನು ಜನರಿಗೆ ತಿಳಿಸುವ ಗುರುತರ ಕೆಲಸ ಎಲ್ಲರ ಮೇಲಿದೆ. ಬಿಜೆಪಿಯ ಸಾಧನೆಯ ಕರಪತ್ರ ಪ್ರತಿ ಮನೆಯಲ್ಲಿರಬೇಕು. ಮಹಿಳೆಯರು, ಮಕ್ಕಳು, ಯುವಕರು ಹಾಗು ಹಿರಿಯ ನಾಗರಿಕರು ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ಅರಿಯಬೇಕು. ಇದರ ಜೊತೆಗೆ ರಾಜ್ಯ ಕಾಂಗ್ರೆಸ್‌ನ ದುರಾಡಳಿತದ ಕುರಿತು ಅರಿವು ಮೂಡಿಸಬೇಕು. ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಜನತೆಗೆ ಅನ್ಯಾಯ ಮಾಡಿರುವ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಹೇಳಿದರು.
ಹುಡಾ ಮಾಜಿ ಅಧ್ಯಕ್ಷ ನವಿಲೆ ಅಣ್ಣಪ್ಪ ಅವರು ಮಾತನಾಡಿ, ಬಿಜೆಪಿಯ ಕಾರ್ಯಕರ್ತರು ಗ್ರಾಮಗಳಿಗೆ ತೆರಳಿ ಹಿರಿಯರನ್ನು ಖುದ್ದಾಗಿ ಭೇಟಿ ಮಾಡಬೇಕು. ಮತ್ತೊಮ್ಮೆ ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಲಿ ಎನ್ನುವ ಜನರು ಕಾಂಗ್ರೆಸ್‌ನಲ್ಲೂ ಇದ್ದಾರೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಆರ್.ಮೋಹನ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮಿತ್ ಶೆಟ್ಟಿ, ಯುವ ಮೋರ್ಚಾ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಸಂಚಾಲಕ ರಾಕೇಶ್ ಗೌಡ, ಪ್ರೀತಿವರ್ಧನ್ ಇತರರು ಇದ್ದರು.
ಸಂಸದರ ಹೇಳಿಕೆ ಸತ್ಯಕ್ಕೆ ದೂರ:
ರಾಷ್ಟ್ರ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ ಹೊರತು ಹಾಸನದಲ್ಲಿ ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ಗೆ ಬೆಂಬಲ ನೀಡುತ್ತಾರೆ ಎಂಬ ಸಂಸದ ಪ್ರಜ್ವಲ್ ರೇವಣ್ಣ ಅವರ ಹೇಳಿಕೆ ಸತ್ಯಕ್ಕೆ ದೂರವಾದುದು. ರಾಷ್ಟ್ರೀಯ ನಾಯಕರು ಇದುವರೆಗೆ ಯಾವ ಮಾರ್ಗದರ್ಶನವನ್ನು ಮಾಡಿಲ್ಲ. ರಾಜ್ಯದ 28 ಕ್ಷೇತ್ರಗಳಿಗೂ ಹೇಗೆ ಕೆಲಸ ಮಾಡಬೇಕೆಂದು ವರಿಷ್ಠರು ಸೂಚಿಸುತ್ತಾರೆ. ಅಲ್ಲಿವರೆಗೆ ಮೈತ್ರಿ ಕುರಿತು ಬಹಿರಂಗ ಹೇಳಿಕೆ ನೀಡಬಾರದು. ಈ ಹಿಂದೆ ಲೋಕಾಸಭೆ ಚುನಾವಣೆಯಲ್ಲಿ 266 ಸೀಟು ಬಂದರೆ ಸಾಕು ಎನ್ನುತ್ತಿದ್ದೆವು. ಆದರೆ ಆಗ ನಮ್ಮ ಗುರಿ 400 ಆಗಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಸಿದ್ದೇಶ ನಾಗೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದರು.