ತಿ.ನರಸೀಪುರ:
ಕಳೆದ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ನ್ಯಾ.ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಬಾಬು ಜಗಜೀವನರಾಮ್ ಸಂಘಟನೆಗಳ ಒಕ್ಕೂಟದ ವತಿಯಿಂದ ಸಂಭ್ರಮಾಚರಣೆ ಮಾಡಲಾಯಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಪ್ರತಿಮೆಗಳಿಗೆ ಶನಿವಾರ ಮಾಲಾರ್ಪಣೆ ಮಾಡಿದ ನಂತರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಮುದಾಯದ ಮುಖಂಡರು ಸಂಭ್ರಮಿಸಿದರು.
ಒಕ್ಕೂಟದ ಅಧ್ಯಕ್ಷ ಹುಣಸೂರು ಪುಟ್ಟಯ್ಯ ಮಾತನಾಡಿ, ಕಳೆದ 30 ವರ್ಷಗಳಿಂದ ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣಕ್ಕಾಗಿ ಹೋರಾಟ ನಡೆದಿತ್ತು. ಬಿಜೆಪಿ ಸರ್ಕಾರ ಸದನದಲ್ಲಿ ಸದಾಶಿವ ಆಯೋಗದ ವರದಿಯನ್ನು ಪರಿಷ್ಕರಣೆ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಮೀಸಲಾತಿ ಪರಿಷ್ಕರಣೆಯ ಪ್ರಕಾರ ದಲಿತ ಎಡಗೈ ಸಮುದಾಯವನ್ನು ಒಳಗೊಂಡ ಜಾತಿಗಳಿಗೆ ಶೇ. 6, ಬಲಗೈ ಸಮುದಾಯವನ್ನು ಒಳಗೊಂಡ ಜಾತಿಗಳಿಗೆ ಶೇ.5.5, ಬಂಜಾರ, ಭೋವಿ ಇತರ ವರ್ಗಕ್ಕೆ ಶೇ.4.5 ಮತ್ತು ಅಲೆಮಾರಿ ಜನಾಂಗಕ್ಕೆ ಶೇ. 1ರ ಮೀಸಲಾತಿಯನ್ನು ವರ್ಗೀಕರಣ ಮಾಡಿ ಸರ್ಕಾರ ನ್ಯಾ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಮೂಗೂರು ಸಿದ್ದರಾಜು, ಉಪಾಧ್ಯಕ್ಷ ಶಿವಣ್ಣ, ಕೆ.ಶಿವಶಂಕರ್, ಪ್ರಧಾನ ಕಾರ್ಯದರ್ಶಿ ವಾಟಾಳು ಪುಟ್ಟಸ್ವಾಮಿ, ಕಾರ್ಯದರ್ಶಿ ವಿ.ಎಸ್.ಶಿವಕುಮಾರ್, ಲಿಂಗರಾಜು, ಜಯಪ್ಪ, ಖಜಾಂಚಿ ಬಿ.ಎಲ್.ಮಹದೇವ, ನಾಗರಾಜು, ಸಹಕಾರ್ಯದರ್ಶಿ ಸುನಿಲ್, ಎಚ್.ನಾಗರಾಜು, ಪುರಸಭೆ ಸದಸ್ಯ ಎಲ್.ಮಂಜುನಾಥ್, ರಂಗಸ್ವಾಮಿ, ಆರ್.ನಾಗಣ್ಣ, ಲಿಂಗರಾಜು, ಸಿದ್ದರಾಜು, ಚಿನ್ನಸ್ವಾಮಿ, ರಾಚಪ್ಪ, ಬಾಲರಾಜು ಇತರರು ಇದ್ದರು.