- ಮಂಗಳೂರು: ಅಮೆರಿಕದ ಇ-ಕಾಮರ್ಸ್ ಕಂಪನಿ ಅಮೆಜಾನ್‌ನ ಕಾನೂನು ಸಲಹೆಗಾರರು ಭಾರತ ಸರ್ಕಾರದ ಅಧಿಕಾರಿಗಳಿಗೆ 8,546 ಕೋಟಿ ರೂ. ಲಂಚ ನೀಡಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಎಐಸಿಸಿ ವಕ್ತಾರೆ, ರಾಜ್ಯಸಭಾ ಸದಸ್ಯೆ ಡಾ.ಅಮೀ ಯಾಜ್ಞಿಕ್ ಒತ್ತಾಯಿಸಿದ್ದಾರೆ.
- ಇದೊಂದು ಬಹುದೊಡ್ಡ ಹಗರಣ. ಈ ಹಣ ಎಲ್ಲಿಗೆ, ಯಾರಿಗೆ ಹೋಗುತ್ತಿದೆ ಎಂಬುದನ್ನು ತಿಳಿಯುವ ಹಕ್ಕು ಜನತೆಗಿದ್ದು, ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು. ವಿದೇಶಿ ಕಂಪನಿಯೊಂದು ಅಧಿಕಾರಿಗಳಿಗೆ ಲೀಗಲ್ ಫೀಯಾಗಿ ಇಷ್ಟೊಂದು ಹಣ ನೀಡಿದೆ ಎನ್ನುವಾಗ ಮನ್ ಕಿ ಬಾತ್ ಮೂಲಕವಾದರೂ ಪ್ರಧಾನಿ ಮೌನ ಮುರಿಯಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
- ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಪಿ.ವಿ.ಮೋಹನ್, ಸದಾಶಿವ ಉಳ್ಳಾಲ್, ಜೋಕಿಂ ಡಿಸೋಜ, ಆರಿಫ್ ಬಾವಾ, ನೀರಜ್ ಪಾಲ್, ಗಣೇಶ್ ಪೂಜಾರಿ, ಶುಭೋದಯ ಆಳ್ವ, ಲಾರೆನ್ಸ್ ಡಿಸೋಜ, ಟಿ.ಕೆ.ಸುಧೀರ್, ನಝೀರ್ ಬಜಾಲ್ ಸುದ್ದಿಗೋಷ್ಠಿಯಲ್ಲಿದ್ದರು.
- 14 ಕೋಟಿ ಉದ್ಯೋಗ ನಷ್ಟ: ಸಣ್ಣ ಪುಟ್ಟ ವ್ಯಾಪಾರ ಸಹಿತ ಸಣ್ಣ, ಕಿರು ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿವೆ. ಕಳೆದ ಒಂದೂವರೆ ವರ್ಷದಲ್ಲಿ 14 ಕೋಟಿ ಉದ್ಯೋಗ ನಷ್ಟ ಅಂದಾಜಿಸಲಾಗಿದೆ. ಈ ಬಗ್ಗೆಯೂ ಕೇಂದ್ರ ಸರ್ಕಾರದ ಅಂಕಿ, ಅಂಶ ನೀಡುತ್ತಿಲ್ಲ. ಈ ಸಣ್ಣ ಉದ್ಯಮಗಳು, ವ್ಯಾಪಾರಿಗಳಿಗೆ ಯಾವ ಹೊಸ ಯೋಜನೆಗಳನ್ನು ಜಾರಿಗೊಳಿಸಿದೆ ಎಂಬುದನ್ನೂ ತಿಳಿಸುತ್ತಿಲ್ಲ. ಆತ್ಮನಿರ್ಭರ್ ಭಾರತವೆಂದು ಹೇಳಿಕೊಂಡು ಇರುವ ಸರ್ಕಾರಿ ಸಂಸ್ಥೆಗಳೆಲ್ಲವನ್ನೂ ಶ್ರೀಮಂತ ಉದ್ಯಮಿಗಳಿಗೆ ಮಾರಾಟ ಮಾಡಿ ಯುವ ಜನಾಂಗವನ್ನು ಉದ್ಯೋಗ ವಂಚಿತರನ್ನಾಗಿಸಿ, ಮುಂದಿನ ಜನಾಂಗಕ್ಕೆ ಸರ್ಕಾರ ಏನನ್ನು ಉಳಿಸುತ್ತಿದೆ ಎಂದು ಅಮೀ ಯಾಜ್ಞಿಕ್ ಪ್ರಶ್ನಿಸಿದರು