ಜಿಲ್ಲೆ

ಕೇಂದ್ರ ಸರ್ಕಾರದಿಂದ ದೇಶದ ಜನರಿಗೆ ಭ್ರಮನಿರಸನ

ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿಯನ್ನು ಮನೆಗೆ ಕಳುಹಿಸಲಾಗಿದೆ. ಕೇಂದ್ರದಲ್ಲೂ ಆ ದಿನಗಳ ಸಮೀಪದಲ್ಲಿವೆ ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ಮಾಡಿದರು. 

ಗುಡೂರಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದ ಬೇಸತ್ತ ಮತದಾರರು ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್ಗೆ ಬಹುಮತ ನೀಡಿದರು. ಮೋದಿಗೂ ಇದೇ ಗತಿಯಾಗಲಿದೆ. ಕಾಂಗ್ರೆಸ್ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಮಗೆ ದೇಶಪ್ರೇಮದ ಬಗ್ಗೆ ಯಾರೂ ಹೇಳಿಕೊಡುವ ಅಗತ್ಯವಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದೇ ಕಾಂಗ್ರೆಸ್ ಹೋರಾಟದಿಂದ. ಪ್ರಜಾಪ್ರಭುತ್ವ, ಜಾತ್ಯತೀತ ತತ್ವದ ತಳಹದಿಯ ಮೇಲೆ ಭಾರತ ರಾಷ್ಟ್ರವನ್ನು ಕಟ್ಟಿದ್ದು ಕಾಂಗ್ರೆಸ್. ದೇಶವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎಂಬುದು ಗೊತ್ತಿದೆ ಎಂದು ಹೇಳಿದರು.

ನಮ್ಮ ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದವರು, ಜಾತ್ಯತೀತ ತತ್ವದ ಅರಿವು ಇಲ್ಲದವರು ಪದೇಪದೆ ಸಂವಿಧಾನ ತಿದ್ದುಪಡಿಯ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ನಾಯಕರು ಯಾವ ದೇಶದಲ್ಲಿ ಹುಟ್ಟಿದ್ದೇವೆ. ನಮ್ಮ ಸಂವಿಧಾನ ಎಂಥದ್ದು ಎಂಬುದನ್ನು ಅರಿಯಬೇಕು ಎಂದು ಕುಟುಕಿದರು.

ಪ್ರತಿಯೊಂದು ವಿಷಯವನ್ನು ಧರ್ಮಕ್ಕೆ ತಳಕು ಹಾಕುವ ಪ್ರಯತ್ನದಲ್ಲಿ ಬಿಜೆಪಿ ನಿರತವಾಗಿದೆ. ಆಡಳಿತ ಅಭಿವೃದ್ಧಿ ಆಧಾರಿತವಾಗಿರಬೇಕೇ ಹೊರತು ಧರ್ಮ ಬೆರೆಸುವ ಪ್ರಯತ್ನ ಮಾಡಬಾರದು. ಮತ ಕೇಳುವಾಗಲೂ ಅಭಿವೃದ್ಧಿ ಆದ್ಯತೆಯಾಗಬೇಕೇ ಹೊರತು ಜಾತಿಯಲ್ಲ ಎಂದು ವಾಗ್ದಾಳಿ ಮಾಡಿದರು.

ಇಳಕಲ್ಗೆ ರೈಲ್ವೆ ಸಂಪರ್ಕ ತಪ್ಪಲು ಸಂಸದ ಪಿ.ಸಿ. ಗದ್ದಿಗೌಡರ್ ಹಾಗೂ ಹುನಗುಂದ ತಾಲೂಕಿನ ಹಲವು ಹಳ್ಳಿಗಳು ಕೆರೆ ತುಂಬಿಸುವ ಯೋಜನೆಯಿಂದ ವಂಚಿತವಾಗಲು ಹಿಂದಿನ ಶಾಸಕ ದೊಡ್ಡನಗೌಡ ಕಾರಣ. ಯಾವ ಕಾರಣಕ್ಕಾಗಿ ಅವರು ತಾಲೂಕಿಗೆ ವಂಚನೆ ಮಾಡಿದರು ಎಂಬುದನ್ನು ಹೇಳಬೇಕು. ಮತ ಕೇಳಲು ಬರುವಾಗ ಗದ್ದಿನಗೌಡರು ಇಳಕಲ್ಗೆ 20 ವರ್ಷಗಳಲ್ಲಿ ನೀಡಿರುವ ಕೊಡುಗೆ ಏನು ಎಂಬುದನ್ನು ಹೇಳಬೇಕು ಎಂದು ಸವಾಲು ಹಾಕಿದರು.

ಬಿಜೆಪಿ ನಾಯಕರಿಗೆ ಸೋಲಿನ ಭೀತಿ

ಬಿಜೆಪಿ ನಾಯಕರ ವರ್ತನೆ ಹಾಗೂ ಹೇಳಿಕೆಗಳನ್ನು ಗಮನಿಸಿದರೆ ಅವರಿಗೆ ಸೋಲಿನ ಭೀತಿ ಆರಂಭವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಹೇಳಿದರು. 

ಮಹಿಳೆಯ ರಕ್ಷಣೆ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಕುಸ್ತಿಪಟುಗಳ ಮೇಲೆ ಲೈಂಗಿಕ ಶೋಷಣೆ, ಮಣಿಪುರ ಹಿಂಸಾಕೃತ್ಯಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

 ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕುಸ್ತಿಪಟುಗಳು ಸತತವಾಗಿ ಹೋರಾಟ ಮಾಡಿದರೂ ಸ್ಪಂದಿಸಲಿಲ್ಲ. ಪದಕಗಳನ್ನು ಮರಳಿಸಿದರೂ ಪ್ರತಿಕ್ರಿಯೆ ನೀಡಲಿಲ್ಲ. ಯಾ ವ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ  ಆರೋಪಕ್ಕೆ ಗುರಿಯಾಗಿದ್ದರೋ ಅವರಿಗೆ ಮತ್ತೆ ಲೋಕಸಭೆಗೆ ಸ್ಪರ್ಧೆ ಮಾಡಲು ಟಿಕೆಟ್ ನೀಡಲಾಗಿದೆ ಎಂದು ವಾಗ್ದಾಳಿ ಮಾಡಿದರು. 

ಕೇಂದ್ರ ಸರ್ಕಾರ ಮನಸ್ಸು ಮಾಡಿದ್ದರೆ ಮಹಿಳೆಯರ ರಕ್ಷಣೆಗೆ ಕಠಿಣ ಕಾಯ್ದೆ ತರಬಹುದಾಗಿತ್ತು. ಆದರೆ ಆ ಕೆಲಸ ಮಾಡಲಿಲ್ಲ ಎಂದರು.

ಮಹಿಳೆಯರ ರಕ್ಷಣೆ ಮಾತುಗಳು ನೈಜ ಕಳಕಳಿಯನ್ನು ಹೊಂದಿಲ್ಲ. ರಾಜಕೀಯಕಾರಣಕ್ಕಾಗಿ ಮಾತನಾಡುತ್ತಿದ್ದಾರೆ. ಅವರೇ ಅಧಿಕಾರದಲ್ಲಿದ್ದು, ಮಹಿಳಾ ರಕ್ಷಣೆಗೆ ಕಠಿಣ ಕಾಯ್ದೆ ರೂಪಿಸಲು ಬೇಡ ಎಂದವರು ಯಾರು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಾಳಜಿ ಇದ್ದ ಕಾರಣದಿಂದಲೇ ಗೃಹಲಕ್ಷ್ಮೀ, ಶಕ್ತಿಯಂತಹ ಯೋಜನೆಗಳನ್ನು ರೂಪಿಸಿದೆ. ಆದರೆ ಈ ಯೋಜನೆಗಳ ಯಶಸ್ಸನ್ನು ಸಹಿಸದ ಕೆಲವರು ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿ ತಮ್ಮ ವ್ಯಕ್ತಿತ್ವ ಏನು ಎಂಬುದನ್ನು ತೋರಿಸಿದರು ಎಂದು ಕುಟುಕಿದರು.

ರವೀಂದ್ರ ಕಲಬುರ್ಗಿ, ರಹಿಮಾನ್ ಸಾಬ್, ವೆಂಕಟೇಶ್, ಶರಣಪ್ಪ ಮತ್ತಿತರರು ಮಾತನಾಡಿದರು, 

ಟೀಕೆ ಮುನ್ನ ಯೋಚಿಸಿ

ಬಿಜೆಪಿ ರಾಷ್ಟ್ರೀಯ ನಾಯಕರ ಮಕ್ಕಳೇ  ಮುಸ್ಲಿಂ ಸಮಾಜದೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದ್ದಾರೆ. ದಿನೇಶ್ ಗುಂಡೂರಾವ್ ಬಗ್ಗೆ ಟೀಕೆ ಮಾಡುವ ಬಿಜೆಪಿ ನಾಯಕರು ಇದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು ಎಂದು ಒಬಿಸಿ ಘಟಕದ ಅಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ವಾಗ್ದಾಳಿ ಮಾಡಿದರು.

ಬಸನಗೌಡ ಪಾಟೀಲ ಯತ್ನಾಳ್ ಅವರು ಗುಂಡೂರಾವ್  ಕುಟುಂಬದ ವಿಚಾರ ಪ್ರಸ್ತಾಪ ಮಾಡಿರುವನ್ನು ಕಟುವಾಗಿ ಟೀಕಿಸಿದ ಗದ್ದನಗೇರಿ ಅವರು, ಅದು ಅವರ ವೈಯಕ್ತಿಕ ವಿಚಾರ. ಅವರೇನು ದೇಶದ್ರೋಹದ ಕೆಲಸ ಮಾಡಿಲ್ಲವಲ್ಲ ಎಂದು ಹೇಳಿದರು.

ಬಾಗಲಕೋಟೆ ಕ್ಷೇತ್ರದ ಹಾಲು ಮತ ಸಮಾಜದವರು ಕಾಂಗ್ರೆಸ್ಗೆ ಮತ ನೀಡಬೇಡಿ ಎಂದು ಯತ್ನಾಳ್ ಕರೆ ನೀಡಿದ್ದಾರೆ. ಯಾರಿಗೆ ಮತ ನೀಡಬೇಕು ಎಂದು ಹಾಲುಮತ ಸಮಾಜಕ್ಕೆ ಹೇಳುವ ಹಕ್ಕನ್ನು ಅವರಿಗೆ ಯಾರು ಕೊಟ್ಟರು ಎಂದು ಪ್ರಶ್ನಿಸಿದರು.