ಜಿಲ್ಲೆ

ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ಹಾಸನ: ಕರ್ನಾಟಕ ರಾಜ್ಯದ ಅಭಿವೃದ್ದಿಗೆ ಜನರ ತೆರಿಗೆ ಪಾಲನ್ನು ಸರಿಯಾಗಿ ನೀಡದ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಗುರುವಾರ ಪ್ರತಿಭಟಿಸಿದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಆದಾಯ ತೆರಿಗೆ ಇಲಾಖೆಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಇಲಾಖೆ ಗೇಟಿನ ಬಳಿ ಪ್ರತಿಭಟನಾಕಾರರನ್ನು ತಡೆದರು.

ನಗರದ ಸಮೀಪ ಬೇಲೂರು ರಸ್ತೆಯ ಬಳಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಎತ್ತಿನ ಗಾಡಿ ಮೇಲೆ ಸಿಲೆಂಡರ್ ಹಿಡಿದು ಮೆರವಣಿಗೆ ಹೊರಟರು. ನಂತರ ಆದಾಯ ತೆರಿಗೆ ಇಲಾಖೆಗೆ ಮುತ್ತಿಗೆ ಹಾಕಲು ಮುಂದಾದರು.

ಇದೆ ವೇಳೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್.ಡಿ. ರಂಗಸ್ವಾಮಿ ಮಾತನಾಡಿ, ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್, ದಿನನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 108 ಡಾಲರ್ ಇತ್ತು. ಇವತ್ತು ಒಂದು ಬ್ಯಾರಲ್‌ಗೆ 64 ಡಾಲರ್ ಬೆಲೆ ಇದೆ. ಕಚ್ಚಾ ತೈಲದ ದರ ಕುಸಿದಿದ್ದರೂ ಸಹ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಕೆ ಕಂಡಿಲ್ಲ ಎಂದು ಆರೋಪಿಸಿದರು.

ಯುಪಿಎ ಸರ್ಕಾರ ಇಂದಂತಹ ಸಂದರ್ಭದಲ್ಲಿ ಗ್ಯಾಸ್ ಬೆಲೆ 414 ರೂ. ಇತ್ತು. ಈಗಿನ ಎನ್‌ಡಿಎ ಸರ್ಕಾರದಲ್ಲಿ ಗ್ಯಾಸ್ ಬೆಲೆ 1,150 ರೂ. ಆಗಿದೆ. ಮತ್ತು ಗೃಹ ನಿರ್ಮಾಣದ ವಸ್ತುಗಳಾದಂತಹ ಸಿಮೆಂಟ್ ಬೆಲೆ 250 ರಿಂದ 450 ರೂ.ಗೆ ಹೆಚ್ಚಿದೆ. ಮತ್ತು ಕೆ.ಜಿ. ಕಬ್ಬಿಣದ ಬೆಲೆ 35 ರೂ.ನಿಂದ ಬೆಲೆ 75ರಿಂದ 80 ರೂ.ಗಳಾಗಿವೆ. ದಿನ ನಿತ್ಯದ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಮತ್ತು ಟೋಲ್ ರಸ್ತೆಗಳ ಮೇಲೆ ಹೆಚ್ಚಿನ ಸುಂಕ ವಿಧಿಸಲಾಗುತ್ತಿದೆ. ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ದರ 5 ರೂ.ನಿಂದ 50 ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದರು.

ಪ್ರತಿಯೊಬ್ಬರ ಮನೆಯಲ್ಲಿ ಕೇಬಲ್‌ಗೆ ತಿಂಗಳಿಗೆ 80 ರೂ. ಇತ್ತು. ಅದು ಈಗ 350 ರೂ. ಆಗಿದೆ. ಜನರಿಂದ ಕೇಂದ್ರ ಸರ್ಕಾರದವರು ಸೂಲಿಗೆ ಮಾಡುತ್ತಿದ್ದಾರೆ. ದ್ವಿ ಚಕ್ರ ವಾಹನಗಳ ಮೇಲೆ ಬೆಲೆ 40 ಸಾವಿರ ರೂ. ಇತ್ತು. ಆದರೆ ಎನ್‌ಡಿಎ ಸರ್ಕಾರ ಬಂದ ಮೇಲೆ ಬೈಕುಗಳ ಬೆಲೆ ಲಕ್ಷ ರೂ.ಗಿಂತ ಹೆಚ್ಚಾಗಿದೆ ಮತ್ತು ಕೇಂದ್ರಕ್ಕೆ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ ಕರ್ನಾಟಕಕ್ಕೆ ನೀಡಬೇಕಾದ ತೆರಿಗೆ ಪಾಲಿನಲ್ಲಿ ಮಲತಾಯಿ ಧೋರಣೆ ಮಾಡಲಾಗಿದೆ. ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಕರ್ನಾಟಕ ಜನರ ತೆರಿಗೆ ಪಾಲನ್ನು ಸರಿಯಾಗಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ತೆರಿಗೆ ಇಲಾಖೆಗೆ ಮುತ್ತಿಗೆ ಹಾಕುವ ಮೂಲಕ ಹೋರಾಟವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಯುಪಿಎ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಒಂದು ಡಾಲರ್‌ಗೆ 56 ರೂಪಾಯಿ ಇತ್ತು. ಎನ್‌ಡಿಎ ಸರ್ಕಾರದಲ್ಲಿ 1 ಡಾಲರ್ ಗೆ 90 ರೂ. ಆಗಿದೆ. ಎನ್‌ಡಿಎ ಅವಧಿಯಲ್ಲಿ ದೇಶ ಎಷ್ಟು ಅಭಿವೃದ್ಧಿಯಾಗಿದೆ ಎಂಬುದನ್ನು ಕೇಂದ್ರ ಸರ್ಕಾರದವರು ಉತ್ತರ ಕೊಡಬೇಕಾಗಿದೆ. ಕೇಂದ್ರ ಸರ್ಕಾರವು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ಚಾರ್ಜ್‌ಶೀಟ್ ಮಾಡಿರುವುದನ್ನು ಖಂಡಿಸಿ ಹೋರಾಟ ಮಾಡಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಸಕಲೇಶಪುರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಇ. ಪುನೀತ್, ಹಾಸನ ಉಪಾಧ್ಯಕ್ಷ ಸಮೀರ್ ಪಾಷಾ, ಬೇಲೂರು ಅಧ್ಯಕ್ಷ ಎಚ್.ಎನ್. ಶರತ್, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಇತರರು ಪಾಲ್ಗೊಂಡಿದ್ದರು.