ಮೈಸೂರು: ರಾಜ್ಯ ಸರ್ಕಾರ ವಿವಿಧ ಪದಾರ್ಥಗಳ ಬೆಲೆಗಳ ಏರಿಕೆ ಮಾಡಿದೆ ಎಂದು ಆರೋಪ ಮಾಡಿ ಬಿಜೆಪಿಯವರು ನಡೆಸಲು ಹೊರಟಿರುವ ಆಹೋರಾತ್ರಿ ಧರಣಿ ಮತ್ತು ಜನಾಕ್ರೋಶ ರ‌್ಯಾಲಿಗೆ ಯಾವುದೇ ಮಹತ್ವವಿಲ್ಲ. ಬಿಜೆಪಿ ನಾಯಕರು ನಿಜವಾಗಿಯೂ ಜನಪರವಾಗಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗಿತ್ತು ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಕುಟುಕಿದ್ದಾರೆ.
ಹೈನುಗಾರಿಕೆಯ ಮೂಲವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಪರಿಸ್ಥಿತಿಯಲ್ಲಿ ಅನ್ನದಾತರ ನೆರವಿಗೆ ನಿಲ್ಲಲು ಹಾಲಿನ ದರ ಏರಿಕೆ ಅನಿವಾರ್ಯ. ಇಂತಹ ಪರಿಸ್ಥಿತಿಯಲ್ಲಿ ದರ ಏರಿಕೆ ವಿರೋಧಿಸುತ್ತಿರುವ ಬಿಜೆಪಿ ನಾಯಕರು ರೈತ ವಿರೋಧಿಗಳೇ ಸರಿ ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರು ಮನಸ್ಸು ಮಾಡಿದರೆ ಪಶು ಆಹಾರ, ಚಿಕಿತ್ಸಾ ವೆಚ್ಚ ಇತ್ಯಾದಿಗಳಿಗೆ ಕೇಂದ್ರದ ನೆರವು ಹೆಚ್ಚಿಸಿ, ಬೆಲೆ ಏರಿಕೆಗೆ ಕಡಿವಾಣ ಹಾಕಬಹುದು. ಆದರೆ ಇದರ ಬದಲು ಬೀದಿಯಲ್ಲಿ ಧರಣಿಯ ನಾಟಕವಾಡಿ ಅನುಕಂಪ ಗಿಟ್ಟಿಸಲು ನಾಯಕರು ಮುಂದಾಗಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್ ಮೇಲೆ ಅನಗತ್ಯವಾಗಿ ಹೊರೆಸುತ್ತಿರುವ ತೆರಿಗೆ ಹೊರೆ ಬಗ್ಗೆ ಬಿಜೆಪಿ ನಾಯಕರು ತುಟಿಬಿಚ್ಚುತ್ತಿಲ್ಲ. ಉದ್ಯಮಿಗಳ ಪರವಾಗಿರುವ ಕೇಂದ್ರ ಸರ್ಕಾರ ಬಡವರ ಜೇಬಿಗೆ ಕೈಹಾಕಿ ತೆರಿಗೆ ಮೂಲಕ ರಾಜ್ಯಗಳ ಹಕ್ಕನ್ನೂ ಕಸಿದುಕೊಳ್ಳುತ್ತಿರುವ ಬಗ್ಗೆ ಇವರು ಉಸಿರೆತ್ತುತ್ತಿಲ್ಲ. ಆದರೂ ರಾಜ್ಯದ ವಿರುದ್ಧ ಪ್ರತಿಭಟನೆಗಿಳಿದಿರುವುದು ನಾಚಿಕೆಗೇಡು ಎಂದು ತಿರುಗೇಟು ನೀಡಿದ್ದಾರೆ.
ಮೋದಿ ಸರ್ಕಾರದ ಬಂಡವಾಳಶಾಹಿ ಪರ ಧೋರಣೆಯಿಂದ ದೇಶ ಅಧೋಗತಿಗೆ ಹೋಗಿದೆ. ಈ ಅನ್ಯಾಯ ಸರಿಮಾಡಿ ರಾಜ್ಯಕ್ಕೆ ನ್ಯಾಯಯುತವಾಗಿ ಧಕ್ಕಬೇಕಾಗಿರುವ ತೆರಿಗೆಯ ಪಾಲನ್ನು ನೀಡಿದರೆ ಬೆಲೆ ಏರಿಕೆಯ ಒತ್ತಡವನ್ನು ರಾಜ್ಯ ಸರ್ಕಾರ ತಗ್ಗಿಸಬಹುದು. ಆದರೆ ಈ ಬಿಸಿ ಸತ್ಯ ಮುಚ್ಚಿಟ್ಟು ಬಿಜೆಪಿ ನಾಯಕರು ಬೀದಿಯಲ್ಲಿ ಪ್ರತಿಭಟನೆಗಿಳಿಯಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇಷ್ಟಕ್ಕೂ ಬೆಲೆ ಏರಿಕೆ ನಡುವೆಯೂ ಹಾಲು, ಮೊಸರಿನ ದರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆಯೇ ಇದೆ. ಬಿಜೆಪಿ ನಾಯಕರು ರಾಜ್ಯದತ್ತ ಬೊಟ್ಟು ಮಾಡುವುದಕ್ಕೂ ಮೊದಲು, ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಪೆಟ್ರೋಲ್, ಡೀಸೆಲ್ ದರ ಇಳಿಸಲು ಆಗ್ರಹಿಸಬೇಕಿದೆ. ನಮ್ಮ ರಾಜ್ಯಕ್ಕೆ ಬರಬೇಕಾದ ತೆರಿಗೆಯ ನ್ಯಾಯಯುತ ಪಾಲು ಒದಗಿಸಲು, ಹೆದ್ದಾರಿ ಟೋಲ್ ಕಡಿಮೆ ಮಾಡಲು, ಬೆಂಗಳೂರು ಕಸ ಸಾಗಿಸಲು ವಿಧಿಸಿರುವ ದುಬಾರಿ ಸೆಸ್ ತೆರವು ಮಾಡಲೂ ಬಿಜೆಪಿ ನಾಯಕರು ಎನ್‌ಡಿಎ ಸರ್ಕಾರವನ್ನು ಆಗ್ರಹಿಸುವುದು ಒಳಿತು ಎಂದು ಹೇಳಿದ್ದಾರೆ.