ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಕೇಂದ್ರ ಸರ್ಕಾರ 9 ವರ್ಷಗಳ ಸೇವೆಯ ಕುರಿತು ಗುರುವಾರ ಕೊಲ್ಲಾಪುರ ಸರ್ಕಲ್ ಬಳಿಯ ವಿವಿದ್ದೋದ್ದೇಶಗಳ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ 5 ದಿನಗಳ ವಿಶೇಷ ಜಾಗೃತಿ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಈರಣ್ಣ ಕಡಾಡಿ ಉದ್ಘಾಟಿಸಿದರು. 
ಜಿಲ್ಲೆ

ಕೇಂದ್ರ ಸರ್ಕಾರದ ಯೋಜನೆಗಳು ಸಮರ್ಪಕ ಬಳಕೆಯಾಗಲಿ-ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

Rayanna R C

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ವಿಶೇಷ ಜಾಗೃತಿ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ

ಬೆಳಗಾವಿ: ಕೇಂದ್ರ ಸರ್ಕಾರ ಕಳೆದ 9 ವರ್ಷಗಳ ಆಡಳಿತ ಅವಧಿಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಆಯುಷ್ಮಾನ್ ಭಾರತ, ಆರೋಗ್ಯ, ಶಿಕ್ಷಣ, ಸ್ವಯಂ ಉದ್ಯೋಗ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳು ಸಮರ್ಪಕ ಬೆಳಕೆಯಾಗಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರಕಾರದ 9 ವರ್ಷಗಳ ಸೇವೆಯ ಕುರಿತು ಗುರುವಾರ ಕೊಲ್ಲಾಪುರ ಸರ್ಕಲ್ ಬಳಿಯ ವಿವಿದ್ದೋದ್ದೇಶಗಳ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ ಐದು ದಿನಗಳ ವಿಶೇಷ ಜಾಗೃತಿ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗರೀಬ್ ಕಲ್ಯಾಣ ಯೋಜನೆ, ಪಿ.ಎಮ್ ಪ್ರಣಾಮ್ ಯೋಜನೆ, ಕೃಷಿ, ಉಜ್ವಲ, ಕಿಸಾನ್ ಸಮ್ಮಾನ್, ಪೋಷಣ ಅಭಿಯಾನ್ ಸೇರಿದಂತೆ ಕಳೆದ 9 ವರ್ಷಗಳಲ್ಲಿ ಜಾರಿಯಾದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಈಗಾಗಲೇ ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಈ ಕುರಿತು ಜನರಿಗೆ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿ ತಲುಪಬೇಕು. ಹಾಗಾಗಿ ಇನ್ನೂ ಯೋಜನೆಯ ಲಾಭ ಪಡೆಯದ ಜನರು ಸರ್ಕಾರದ ಕಲ್ಯಾಣ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇಡೀ ವಿಶ್ವ ಭಾರತ ದೇಶದ ಕಡೆಗೆ ಗಮನ ಹರಿಸುವತ್ತ ದೇಶ ಬೆಳೆದು ನಿಂತಿದೆ. ಹಳೆಯ ಕಾಲಘಟ್ಟಕ್ಕೆ ಹೋಲಿಸಿದರೆ ಭಾರತ ಈಗ 350 ಟನ್ ಆಹಾರ ಉತ್ಪಾದಿಸಿ ಇತರ ದೇಶಗಳಿಗೆ ರಪ್ತು ಮಾಡುತ್ತಿದೆ ಹಾಗಾಗಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಿಂದ ಎಲ್ಲ ಕ್ಷೇತ್ರಗಳಲ್ಲೂ ದೇಶ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋದಲ್ಲಿ ಈಗಾಗಲೇ ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ನಿರ್ಮಾಣ ಮಾಡಲಾಗಿದೆ. ಅದೇ ರೀತಿಯಲ್ಲಿ ಸುಮಾರು 190 ಕೋಟಿ ವೆಚ್ಚದಲ್ಲಿ ಬೆಳಗಾವಿ ಹೊಸ ರೈಲ್ವೆ ನಿಲ್ದಾಣ ಚಾಲನೆ ನೀಡಲಾಗಿದೆ. ಧಾರವಾಡ ಹಾಗೂ ಬೆಳಗಾವಿಗೆ ನೇರ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಭೂಮಿ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಅರ್ಹರಿಗೆ ಯೋಜನೆಗಳು ತಲುಪಬೇಕು:
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಗರೀಬ್ ಕಲ್ಯಾಣ್ ಯೋಜನೆಯಡಿ ಪ್ರತಿ ಕುಟುಂಬದ ಸದಸ್ಯರಿಗೆ 5 ಕೆಜಿ ಉಚಿತ ಅಕ್ಕಿ ನೀಡಲಾಗುತ್ತದೆ. ಪಿಎಂ ಕಿಸಾನ್ ಸಮ್ಮಾನ್ ಯೋಜಯಡಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಉಜ್ವಲ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3, ಲಕ್ಷ 46 ಸಾವಿರ ಫಲಾನುಭವಿಗಳಿಗೆ ಉಚಿತ ಸಿಲೆಂಡರ್ ಸಂಪರ್ಕ ನೀಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.
ಲೋಕಸಭಾ ಸಸ್ಯೆ ಮಂಗಲ ಅಂಗಡಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ 9 ವರ್ಷಗಳ ಅವಧಿಯಲ್ಲಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜಲ ಜೀವನ ಮಿಷನ್, ಮಾತೃ ವಂದನಾ ಸೇರಿದಂತೆ ವಿವಿಧ ಯೋಜನೆಗಳ ಸದುಪಯೋಗ ಈಗಾಗಲೇ ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಸಾರ್ವಜನಿಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸರ್ಕಾರದ ಧಾರವಾಡ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ. ಎಸ್.ಟಿ ಅವರು, ರಾಜ್ಯದ 7 ಜಿಲ್ಲೆಯಲ್ಲಿ ಸರ್ಕಾರದ ಜನಪರ ಯೋಜನೆಗಳಾದ ಏಕ ಭಾರತ, ಅಜಾದಿಕಾ ಅಮೃತ ಮಹೋತ್ಸವ ಸೇರಿದಂತೆ ವಿವಿಧ ಯೋಜನೆಗಳ ಛಾಯಾಚಿತ್ರ ಪ್ರದರ್ಶನ ಪ್ರದರ್ಶಿಸಲಾಗುತ್ತಿದೆ ಎಂದರು. ಡಿಸಿ ನಿತೇಶ್ ಪಾಟೀಲ, ಜಿ.ಪಂ. ಸಿಇಒ ಹರ್ಷಲ್ ಭೋಯರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾಗರಾಜ್ ಆರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಎಂ ಕಾಂಬ್ಳೆ, ಡಿಎಚ್‌ಒ ಮಹೇಶ ಕೊಣಿ, ಜಿ.ಪಂ. ಮುಖ್ಯ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಬಿ. ಶ್ರೀನಿವಾಸ್ ಮತ್ತು ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.