ಕಲಬುರಗಿ: ರಾಮಮಂದಿರ ನಿರ್ಮಾಣದಂತಹ ಭಾವನಾತ್ಮಕ ವಿಷಯದ ಮೇಲೆ ರಾಜಕಾರಣ ಮಾಡದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ರಮ ಮಾಡಬೇಕು, ಬಜೆಟ್ ಪೂರ್ವ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜ.20ರಂದು ಕೇಂದ್ರ ಸರ್ಕಾರದ ಭೂತದಹನ (ಪ್ರತಿಕೃತಿ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ.ಮಹೇಶ ರಾಠೋಡ ತಿಳಿಸಿದರು.
ಬರಗಾಲ ಪರಿಹಾರ ನಿಧಿ ಬಿಡುಗಡೆ ಮಾಡಬೇಕು, ಮನರೇಗಾ ಯೋಜನೆಯ ಕೂಲಿ ದಿನ ೨೦೦ಕ್ಕೆ ಹೆಚ್ಚಿಸಬೇಕು, ವಸತಿ ಸಮಸ್ಯೆ ನೀಗಿಸಬೇಕು, ಕಾರ್ಪೋರೇಟ್ ಪರ ಕಾರ್ಮಿಕ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು, ರೈತ ವಿರೋಧಿ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಬೇಕು, ಉದ್ಯೋಗ ಸೃಷ್ಟಿಸಬೇಕು ಎಂಬುದು ಸೇರಿ ವಿವಿಧ ಹಕ್ಕೊತ್ತಾಯ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಿಪಿಐ ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ, ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ಭೀಮಾಶಂಕರ ಮಾಡಿಯಾಳ ಇತರರಿದ್ದರು.