ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಆಶ್ರಯದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಕಾರ್ವಿುಕ ಹಾಗೂ ಜನ ವಿರೋಧಿ ನೀತಿ ಖಂಡಿಸಲಾಯಿತು.
ಎಐಟಿಯುಸಿ, ಸಿಐಟಿಯು, ಟಿಯುಸಿಸಿ, ಐಎನ್ಟಿಯುಸಿ, ಎಐಯುಟಿಯುಸಿ, ಎಚ್ಎಂಎಸ್, ಎಐಐಇಎ, ಕೆವಿಜಿಬಿಇಎ ಮುಂತಾದ ಸಂಘಟನೆಗಳ ಆಶ್ರಯದಲ್ಲಿ ನಗರದ ಡಾ. ಅಂಬೇಡ್ಕರ್ ವೃತ್ತದಲ್ಲಿ ಬೆಳಗ್ಗೆ 11ಕ್ಕೆ ಜಮಾಯಿಸಿದ ನೂರಾರು ಕಾರ್ವಿುಕರು ನಂತರ ಮೆರವಣಿಗೆ ನಡೆಸಿದರು.
ಸರ್ ಸಿದ್ದಪ್ಪ ಕಂಬಳಿ ಮಾರ್ಗದ ಮೂಲಕ ಆಗಮಿಸಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಕಾರ್ವಿುಕ ಮುಖಂಡರಾದ ಮಹೇಶ ಪತ್ತಾರ, ದೇವಾನಂದ ಜಗಾಪುರ, ಬಿ.ಎ. ಮುಧೋಳ, ಅಮೃತ ಇಜಾರೆ, ಸ್ಟೀಫನ್ ಜಯಚಂದ್ರ, ಗುರುಸಿದ್ದಪ್ಪ ಅಂಬಿಗೇರ, ಸಿದ್ದು ತೇಜಿ ಇತರರು ಕೇಂದ್ರ ಸರ್ಕಾರದ ಕಾರ್ವಿುಕ ಹಾಗೂ ಜನ ವಿರೋಧಿ ನೀತಿ ಖಂಡಿಸಿದರು.
ಈ ದೇಶದ ಜನರಿಗೆ ಅಚ್ಛೇ ದಿನ್ ಬರಬೇಕಾದರೆ ಕನಿಷ್ಠ 21 ಸಾವಿರ ರೂ. ಕೂಲಿ ಕೊಡಿ, ನಿವೃತ್ತಿ ನಂತರ 10 ಸಾವಿರ ರೂ. ಪಿಂಚಣಿ ನೀಡಿ, ಕಾರ್ವಿುಕರಿಗೆ ಅನ್ಯಾಯವಾಗುವ ನಿರ್ಧಾರ ಕೈಗೊಳ್ಳಬೇಡಿ, ಬ್ಯಾಂಕ್ ವಿಲೀನ ಪ್ರಕ್ರಿಯೆ ಕೈಬಿಡಿ ಎಂದು ಆಗ್ರಹಿಸಿದರು. ಪ್ರತಿ ಜಿಲ್ಲೆಯಲ್ಲಿ ಕಾರ್ವಿುಕ ಕೋರ್ಟ್ ಸ್ಥಾಪನೆ, ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಅನ್ವಯ ಕೂಡಲೆ ಅಧಿಸೂಚನೆ ಹೊರಡಿಸಬೇಕು. ಆರ್ಥಿಕ ಹಿಂಜರಿತ ಹಿನ್ನೆಲೆಯಲ್ಲಿ ಕಾರ್ವಿುಕ ಸ್ನೇಹಿ ನೀತಿ ರೂಪಿಸಬೇಕು, ಗುತ್ತಿಗೆ ಆಧಾರದ ನೇಮಕಾತಿ ನಿಲ್ಲಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಎಸ್ಬಿಐ ಹೊರತುಪಡಿಸಿ ವಿವಿಧ ಬ್ಯಾಂಕ್ ನೌಕರರು, ಎಪಿಎಂಸಿ ಹಮಾಲಿ ಕಾರ್ವಿುಕರು, ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್, ಬಿಎಸ್ಎನ್ಎಲ್ ನೌಕರರು ಸೇರಿ ಇನ್ನೂರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಸಮಾವೇಶಕ್ಕೆ ಪೊಲೀಸರು ಅನುಮತಿ ನೀಡಿದ್ದರು. 10 ನಿಮಿಷ ಮುಂಚಿತವಾಗಿಯೇ ಬಹಿರಂಗ ಸಮಾವೇಶ ಸಮಾರೋಪಗೊಳಿಸಲಾಯಿತು.
ವಿವಿಧ ಕಾರ್ವಿುಕ ಸಂಘಟನೆಗಳ ಅಶೋಕ ರ್ಬಾ, ಆರ್.ಎಫ್. ಕವಳಿಕಾಯಿ, ಜಿ.ಎಂ. ವೈದ್ಯ, ಶಿವಣ್ಣ ಹುಬ್ಬಳ್ಳಿ, ಬಸೀರ ಮುಧೋಳ, ಬಸವಣ್ಣೆಪ್ಪ ನೀರಲಗಿ, ಗಂಗಾಧರ ಬಡಿಗೇರ, ಅನ್ನಪೂರ್ಣಾ ಗಿರಿಯಪ್ಪಗೌಡರ, ಸುಶೀಲಾ ಮುಗಳಿ, ಪವಿತ್ರಾ ಹೂಲಿಕಟ್ಟಿ, ಶೋಭಾ ಪಡಕೆ, ಸವಿತಾ ಮಜ್ಜಗಿ, ಬಸವ್ವ ಬಿದರಕುಂದಿ, ದಾವಲಬಿ, ಶಕುಂತಲಾ, ಇತರರು ಸಮಾವೇಶದಲ್ಲಿದ್ದರು. ಈ ಮಧ್ಯೆ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ನ ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಅನ್ವರ ಮುಧೋಳ, ಬಾಬಾಜಾನ್ ಮುಧೋಳ, ವಿಜಯ ಗುಂಟ್ರಾಳ, ಇತರರು ಮೋದಿ ವಿರುದ್ಧ ಘೋಷಣೆಯ ಬ್ಯಾನರ್ ಸುಡಲು ಮುಂದಾದರು. ಕೂಡಲೆ ಮಧ್ಯ ಪ್ರವೇಶಿಸಿದ ಪೊಲೀಸರು ಬೆಂಕಿ ಹಚ್ಚುವುದನ್ನು ತಡೆದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ: ಧಾರವಾಡ ನಗರದಲ್ಲಿ ವಿವಿಧ ಕಾರ್ವಿುಕ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿದವು. ಅಂಗಡಿ- ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಶಾಲೆ- ಕಾಲೇಜ್, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ಸಂಚಾರದಲ್ಲಿ ವ್ಯತ್ಯಯವಾಗಲಿಲ್ಲ.
ನಗರದ ಕಲಾಭವನದ ಮೈದಾನದಲ್ಲಿ ಜಮಾಯಿಸಿದ್ದ ಟಾಟಾ ಮಾಕೋಪೊಲೊ ಕ್ರಾಂತಿಕಾರಿ ಸಂಘ, ಕಾರ್ವಿುಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು), ಕಾರ್ವಿುಕರು, ಮಜ್ದೂರ್ ಅಧಿಕಾರ ಸಂಘರ್ಷ ಅಭಿಯಾನ (ಮಾಸಾ), ರಾಷ್ಟ್ರೀಯ ಕಿಸಾನ್ ಸಂಘ
(ಆರ್ಕೆಎಸ್), ಎಐಡಿವೈಒ ಇತರ ಕಾರ್ವಿುಕ ಸಂಘಟನೆಗಳಿಗೆ ಪ್ರತಿಭಟನೆ ಮೆರವಣಿಗೆ ನಡೆಸಲು ಪೊಲೀಸರ ಅವಕಾಶ ನೀಡಲಿಲ್ಲ. ಹೀಗಾಗಿ ಖಾಸಗಿ ಬಸ್ಗಳಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಕರೆತರಲಾಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಗುತ್ತಿಗೆ ಕಾರ್ವಿುಕ ಪದ್ಧತಿ ರದ್ದಾಗಬೇಕು. ಕಾರ್ವಿುಕ ಕಾಯ್ದೆ ತಿದ್ದುಪಡಿ ನಿಲ್ಲಿಸಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಸ್ಥಗಿತಗೊಳಿಸಬೇಕು ಎಂಬ ಘೊಷಣೆಗಳನ್ನು ಕೂಗಿದರು. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಡಳಿತದ ಅಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ರವಾನಿಸಿದರು.
ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿತ್ತು. ಕೆ.ಬಿ. ಗೋನಾಳ, ಮಲ್ಲಿಕಾರ್ಜುನ ಮರತಮ್ಮನವರ, ಸಿದ್ದನಗೌಡ ಪಾಟೀಲ, ವಿಜಯ ಗುಂಟ್ರಾಳ, ಕೆ.ಎಚ್. ಪಾಟೀಲ, ಭೀಮಾಶಂಕರ ಪೂಜಾರಿ, ಮಹಮ್ಮದರಫೀಕ ತಹಸೀಲ್ದಾರ್, ರವಿ ಹೆಗ್ಗೇರಿ, ಎಐಟಿಯುಸಿ ಜಿಲ್ಲಾಧ್ಯಕ್ಷೆ ಭುವನಾ ಬಳ್ಳಾರಿ, ಶಾಂತಾ ಚವ್ಹಾಣ, ಸುಶೀಲಾ ಮುಗಳಿ, ಸಪ್ನಾ ಸುಳ್ಳದ, ಸುಧಾ ಗುಮ್ಮಗೋಳ, ಕವಿತಾ ಪವಾರ ಸೇರಿ ಸಾವಿರಾರು ಕಾರ್ವಿುಕರು ಪಾಲ್ಗೊಂಡಿದ್ದರು.