ಹುಬ್ಬಳ್ಳಿ: ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ಹಾಗೂ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಹದಾಯಿ, ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ ನೇತೃತ್ವದಲ್ಲಿ ನೂರಾರು ರೈತರು ಕಿರೇಸೂರ ಗ್ರಾಮದ ವಿಜಯಪುರ- ಹುಬ್ಬಳ್ಳಿ ಹೆದ್ದಾರಿಯಲ್ಲಿ ಸಂಚಾರ ತಡೆದು ಶನಿವಾರ ಪ್ರತಿಭಟನೆ ನಡೆಸಿದರು.
ಸಂಚಾರ ತಡೆಯಿಂದಾಗಿ ಪ್ರತಿಭಟನೆ ಸ್ಥಳದ ಎರಡೂ ಬದಿ ಹಲವಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಶಾಲೆ ಮುಗಿಸಿಕೊಂಡು ಊರಿಗೆ ಮರಳುತ್ತಿದ್ದ ವಿದ್ಯಾರ್ಥಿಗಳು, ಬಸ್ಗಳಲ್ಲಿದ್ದ ಮಹಿಳೆಯರು, ವೃದ್ಧರು, ಮಕ್ಕಳು ತೊಂದರೆ ಅನುಭವಿಸಬೇಕಾಯಿತು.
ಪ್ರತಿಭಟನೆ ಹಿಂಪಡೆಯುವಂತೆ ಪೊಲೀಸರು ಮಾಡಿದ ಮನವಿ ತಿರಸ್ಕರಿಸಿದ ರೈತರು, ಸ್ಥಳಕ್ಕೆ ತಹಸೀಲ್ದಾರರು ಬರುವವರೆಗೂ ಹೆದ್ದಾರಿ ತಡೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಈ ಮಧ್ಯೆ ರೈತರನ್ನು ಬಂಧಿಸಲು ಪೊಲೀಸರು ಮುಂದಾದರು. ಆದರೆ, ಪ್ರತಿಭಟನೆಗೆ ಇನ್ನೂ ಕೆಲ ಸಮಯ ಅವಕಾಶ ನೀಡುವಂತೆ ರೈತರು ಮಾಡಿಕೊಂಡ ಮನವಿಗೆ ಪೊಲೀಸರು ಸಮ್ಮತಿಸಿದರು. ನಂತರ ಕೆಲ ಸಮಯದ ನಂತರ ಪ್ರತಿಭಟನೆಯಿಂದ ಹಿಂದೆ ಸರಿದರು.
ಅಮೃತ ಇಜಾರಿ, ಮಹೇಶ ಪತ್ತಾರ, ರಾಜು ಪಾಟೀಲ, ಶಿವಣ್ಣ ಹುಬ್ಬಳ್ಳಿ, ಮಹೇಶ ನಾವಳ್ಳಿ, ಶಂಕರಗೌಡ ಪಾಟೀಲ, ಬಂಗಾರೇಶ ಹಿರೇಮಠ, ಅನಂತಗೌಡ ಪಾಟೀಲ, ಎನ್.ಎಚ್. ಪಾಟೀಲ, ಉಮೇಶ ದಾಡಿಬಾವಿ, ಮಂಜು ಕಂಬಳಿ, ಚಂದುಸಾಬ ನದಾಫ, ಬಿ.ಎಂ. ಓಲೆಕಾರ ಸೇರಿ ಕಿರೇಸೂರ, ಹೆಬಸೂರ, ಬೆನ್ನೂರ, ಶಿಶುವಿನಹಳ್ಳಿ, ಇಂಗಳಳ್ಳಿ, ದುಂದೂರ, ಬಲ್ಲರವಾಡ ಹಾಗೂ ಸುತ್ತಲಿನ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಯರಿಕೊಪ್ಪ ಬೈಪಾಸ್ ಬಳಿ ಪ್ರತಿಭಟನೆ
ಧಾರವಾಡ: ಕಿಸಾನ್ ಸಂಯುಕ್ತ ಮೋರ್ಚಾ ಅಖಿಲ ಭಾರತ ಸಮಿತಿಯ ಕರೆಯ ಮೇರೆಗೆ ನಗರದಲ್ಲಿ ಸಂಯುಕ್ತ ಹೋರಾಟ, ಧಾರವಾಡ, ರೈತ- ಕಾರ್ವಿುಕ- ದಲಿತ- ಪ್ರಗತಿಪರ ಸಂಘಟನೆಗಳ ಒಕ್ಕೂಟಗಳ ನೇತೃತ್ವದಲ್ಲಿ ಶನಿವಾರ ಯರಿಕೊಪ್ಪ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.
ರೈತ ಕೃಷಿ ಕಾರ್ವಿುಕರ ಸಂಘಟನೆ (ಆರ್ಕೆಎಸ್- ಎಐಕೆಕೆಎಂಎಸ್) ಸಂಘಟನೆಯ ಲಕ್ಷ್ಮಣ ಜಡಗನ್ನವರ, ಶರಣು ಗೋನವಾರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಬಣ) ಕಲ್ಮೇಶ ಲಿಗಾಡೆ, ಸುಭಾಸ ಕಲಕೇರಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನಾಗಪ್ಪ ಉಂಡಿ, ಸಿಎಫ್ಡಿಯ ಡಾ. ವೆಂಕನಗೌಡ ಪಾಟೀಲ, ಎಸ್ಯುುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, ಮಹದಾಯಿ- ಕಳಸಾ ಬಂಡೂರಿ ಹೋರಾಟ ಸಮಿತಿಯ ಲಕ್ಷ್ಮ್ಮ ಬಕ್ಕಾಯಿ, ಷರೀಫ ಅಮ್ಮಿನಬಾವಿ, ಸಲೀಂ ಸಂಗನಮುಲ್ಲಾ, ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷೆ ಭುವನಾ, ಎಐಎಂಎಸ್ಎಸ್ ಜಿಲ್ಲಾಧ್ಯಕ್ಷ ಮಧುಲತಾ ಗೌಡರ, ಎಐಡಿಎಸ್ಒ ಜಿಲ್ಲಾಧ್ಯಕ್ಷ ಮಹಾಂತೇಶ ಬೀಳೂರು, ಎಐಡಿವೈಒ ಜಿಲ್ಲಾಧ್ಯಕ್ಷ ಭವಾನಿಶಂಕರ, ಕಾಂಗ್ರೆಸ್ ಮುಖಂಡರಾದ ಪ್ರೊ. ಐ.ಜಿ. ಸನದಿ, ಶಾಕೀರ್ ಸನದಿ, ಶಿವಶಂಕರ ಹಂಪಣ್ಣವರ, ಇತರರು ಪಾಲ್ಗೊಂಡಿದ್ದರು.