ಕಡೂರು: ಮಾನವೀಯತೆ ಇಲ್ಲದ ದುರುಳರು ಮಾನವ ಕುಲಕ್ಕೆ ಮುಳ್ಳಾಗಿದ್ದಾರೆ. ಪಹಲ್ಗಾಮ್‌ನಲ್ಲಿ ಹೇಯಕೃತ್ಯ ನಡೆಸಿದ ಭಯೋತ್ಪಾದಕರನ್ನು ಹುಡುಕಿ ತಕ್ಕ ಶಿಕ್ಷೆ ವಿಧಿಸಬೇಕು ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಗೋವಿಂದಸ್ವಾಮಿ ಒತ್ತಾಯಿಸಿದರು.
ಪಹಲ್ಗಾಮ್ ಘಟನೆ ಖಂಡಿಸಿ ಶುಕ್ರವಾರ ವಕೀಲರ ಸಂಘದಿಂದ ಕೆಎಲ್‌ವಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಮಾತನಾಡಿ, ಕೇಂದ್ರ ಸರ್ಕಾರ ದಿಟ್ಟತನದಿಂದ ಭಯೋತ್ಪಾದನೆ ಮಟ್ಟಹಾಕಬೇಕು ಎಂದರು.
ಹಿರಿಯ ವಕೀಲ ಸಿ.ಜೆ.ಮಂಜುನಾಥ್ ಮಾತನಾಡಿ, ದೇಶಕ್ಕಾಗಿ ಪ್ರತಿ ಪ್ರಜೆಯೂ ಕೇಂದ್ರ ಸರ್ಕಾರದ ಜತೆ ನಿಲ್ಲುತ್ತಾರೆ. ವಕೀಲರೂ ಸಹಕಾರ ನೀಡುತ್ತೇವೆ. ಕೃತ್ಯ ನಡೆಸಿದ ಉಗ್ರರನ್ನು ಹಿಡಿದು ಶಿಕ್ಷಿಸಿ ಎಂದು ಒತ್ತಾಯಿಸಿದರು.
ಹಿರಿಯ ವಕೀಲ ಕೆ.ಎಂ.ಜಯಣ್ಣ ಮಾತನಾಡಿ, ಪಹಲ್ಗಾಮ್ ಸ್ಥಳೀಯರ ಸಹಕಾರದಿಂದಲೇ ದಾಳಿ ನಡೆದಿರುವ ಶಂಕೆ ಇದೆ. ಹತ್ಯೆ ಮಾಡಿದ ಯಾರೊಬ್ಬರನ್ನೂ ಬಿಡದೆ ಹುಡುಕಿ ಶಿಕ್ಷಿಸಬೇಕು ಎಂದರು.
ಹಿರಿಯ ವಕೀಲರಾದ ಕೆ.ಎನ್.ರಾಜಣ್ಣ, ಎಚ್.ಟಿ.ರಾಜು, ಬಿ.ಶಿವಕುಮಾರ್, ಕೆ.ಪಿ.ನೀಲಕಂಠಪ್ಪ, ಸಿ.ಎಲ್.ದೇವರಾಜ್, ಪ್ರಸನ್ನ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಆರ್.ಹರೀಶ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ರೇಣುಕಾಪ್ರಸಾದ್, ವಸಂತ ಎನ್.ಎಂ.ಗೋಪಾಲ್, ಪುಷ್ಪಾಲತಾ ಸೋಮೇಶ್, ರೇಖಾ ಹಾಗೂ ವಕೀಲರ ಸಂಘದ ಸದಸ್ಯರು ಇದ್ದರು.