ಜಿಲ್ಲೆ

ಕೇಂದ್ರ, ರಾಜ್ಯ ಸರ್ಕಾರಗಳ ಬಜೆಟ್‌ ಖಂಡಿಸಿ ಎಸ್‌ಯುಸಿಐಸಿನಿಂದ ಪ್ರತಿಭಟನೆ

ಮೈಸೂರು: ಕೇಂದ್ರ, ರಾಜ್ಯ ಸರ್ಕಾರಗಳ ಬಜೆಟ್ ಖಂಡಿಸಿ, ಅದಾನಿ ಕಂಪನಿ ಅವ್ಯವಹಾರದ ಕುರಿತು ತನಿಖೆಗೆ ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.


ಕೋವಿಡ್‌ನಿಂದ ಸುಧಾರಿಸಿಕೊಂಡಿರುವ ಜನರು ಬೆಲೆ ಏರಿಕೆ, ಹಣದುಬ್ಬರ, ಉದ್ಯೋಗ ನಾಶಗಳಿಂದ ಮತ್ತೆ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ರೈತರ, ಕಾರ್ಮಿಕರ ಬದುಕಿಗೆ ಭದ್ರತೆ ನೀಡುವ, ಖಾಲಿ ಹುದ್ದೆ ತುಂಬುವ, ಜೀವನಾವಶ್ಯಕ ವಸ್ತುಗಳ ಬೆಲೆ ನಿಯಂತ್ರಿಸುವಂತಹ ಬಜೆಟ್ ಮಂಡಿಸಬೇಕಿತ್ತು. ಆದರೆ, ಡಬಲ್ ಎಂಜಿನ್ ಸರ್ಕಾರ ಎಂದು ಕೊಚ್ಚಿಕೊಳ್ಳುವ ಬಿಜೆಪಿ ಜನರಿಗೆ ದ್ರೋಹ ಬಗೆದಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.


ಕೇಂದ್ರ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ, ಕೃಷಿ, ರಸಗೊಬ್ಬರ, ಆಹಾರ ಸಬ್ಸಿಡಿ, ಪಡಿತರ ವಿತರಣೆಗೆ ನೀಡುವ ಅನುದಾನವನ್ನು ಕಡಿತಗೊಳಿಸಿರುವುದು ಸರಿಯಲ್ಲ. ಇವುಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಣೆ ಮಾಡಿ ಕೂಲಿ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.


ಉದ್ಯಮಿ ಗೌತಮ್ ಅದಾನಿ ಕಂಪನಿಗಳು ನಡೆಸಿರುವ ಕಾನೂನು ಬಾಹಿರ ವ್ಯವಹಾರಗಳ ಕುರಿತು ಹಿಂಡನ್‌ಬರ್ಗ್ ಸಂಸ್ಥೆ ಬಹಿರಂಗಪಡಿಸಿರುವ ವರದಿ ದೇಶದ ಷೇರುಪೇಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿದೆ. ಈ ಆರೋಪಗಳ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.


ಕೇಂದ್ರ ಸರ್ಕಾರವು ಸಾರ್ವಜನಿಕರ ಆಸ್ತಿಯನ್ನು ಒಂದೊಂದಾಗಿ ಅದಾನಿ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ರೈಲು, ವಿಮಾನ ನಿಲ್ದಾಣಗಳು, ವಿದ್ಯುತ್ ಉತ್ಪಾದನೆ, ಮಿಲಿಟರಿ ವಸ್ತುಗಳ ಉತ್ಪಾದನೆಯಂತಹ ರಂಗಗಳೂ ಖಾಸಗೀಕರಣಗೊಳ್ಳುತ್ತಿದೆ. ರೈತರಿಗೆ, ಬಡವರಿಗೆ ನೀಡುತ್ತಿದ್ದ ವಿದ್ಯುತ್ ಶುಲ್ಕ ರಿಯಾಯಿತಿ ಕೊನೆಗಾಣಿಸಲು ಪ್ರೀಪೇಯ್ಡ ಸ್ಮಾರ್ಟ್ ಮೀಟರ್ ಅವಡಿಸಲಾಗುತ್ತಿದೆ. ತಕ್ಷಣ ಖಾಸಗೀಕರಣವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.


ರಾಜ್ಯ ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಬಂದಿದೆ. ಈ ಕುರಿತು ನ್ಯಾಯಾಂಗ ತನಿಖೆ ನಡೆಸಿ ಭ್ರಷ್ಟರಿಗೆ ಕಠಿಣ ಶಿಕ್ಷೆ ಆಗಬೇಕಿದೆ. ಆದ್ದರಿಂದ ರಾಷ್ಟ್ರಪತಿ, ರಾಜ್ಯಪಾಲರು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕ ಶಿಕ್ಷಣ, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.


ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಬಿ.ರವಿ, ಚಂದ್ರಶೇಖರ್ ಮೇಟಿ, ಜಿ.ಎಸ್.ಸೀಮಾ, ಪಿ.ಎಸ್.ಸಂಧ್ಯಾ, ವಿ.ಯಶೋಧರ, ಹರೀಶ್, ಸುನಿಲ್, ಸುಭಾಷ್, ಬಸವರಾಜು, ಸುಮಾ, ಚಂದ್ರಕಲಾ, ಆಸಿಯಾ ಬೇಗಂ ಇನ್ನಿತರರು ಇದ್ದರು