ದಾವಣಗೆರೆ: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ನೇತೃತ್ವದ ಸ್ಕೀಂ ವರ್ಕರ್ಸ್ ಸಂಘಟನೆಗಳ ಸಮನ್ವಯ ಸಮಿತಿ ಅಡಿ ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತರು, ಮುಖಂಡರು ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ ಬುಧವಾರ ಮನವಿಪತ್ರ ಸಲ್ಲಿಸಿದರು.
ಸ್ಕೀಮ್ ಯೋಜನೆಗಳಲ್ಲಿ ಅಂಗನವಾಡಿ, ಬಿಸಿಯೂಟ ತಯಾರಕರು, ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಸ್ಕೀಮ್ ಯೋಜನೆಗಳಡಿ ಕಾರ್ಯಕರ್ತರಿಗೆ ಹೆಚ್ಚುವರಿ ಕೆಲಸ ನೀಡಲಾಗಿದೆ. ಅದಕ್ಕೆ ತಕ್ಕಂತೆ ವೇತನ ದೊರೆಯುತ್ತಿಲ್ಲ ಎಂದು ಸಂಸದರ ಗಮನಕ್ಕೆ ತಂದರು.
ಅಂಗನವಾಡಿ ಕಾರ್ಯಕರ್ತೆಯರಿಗೆ 4500 ರೂ, ಸಹಾಯಕಿಯರಿಗೆ 2500 ರೂ, ಬಿಸಿಯೂಟ ತಯಾರಕರಿಗೆ 1 ಸಾವಿರ ರೂ, ಆಶಾ ಕಾರ್ಯಕರ್ತೆಯರಿಗೆ 2 ಸಾವಿರ ರೂ. ನೀಡಲಾಗುತ್ತಿದ್ದು, ಇದರಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಗೌರವಧನ ಕೂಡ ಸಕಾಲಕ್ಕೆ ಸಿಗುತ್ತಿಲ್ಲ. ಸ್ಕೀಂ ಕಾರ್ಯಕರ್ತೆಯರನ್ನು ಕಾಯಂಗೊಳಿಸಬೇಕು.
ಈ ಎಲ್ಲ ಕಾರ್ಯಕರ್ತೆಯರಿಗೆ 21 ಸಾವಿರ ರೂ.ಗಳ ಕನಿಷ್ಠ ವೇತನ, ನಿವೃತ್ತಿ ಯಾದವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ಆರೋಗ್ಯ ವಿಮೆ, ಗ್ರಾಚ್ಯುಟಿ, ಮರಣ ಪರಿಹಾರ ಹಾಗೂ ಮತ್ತಿತರೆ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ಒತ್ತಾಯ ಮಾಡಬೇಕೆಂದರು.
ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು, ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಜಿಲ್ಲಾಧ್ಯಕ್ಷೆ ಎಂ.ಬಿ.ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಲ್ಲಮ್ಮ, ಖಜಾಂಚಿ ವಿಶಾಲಾಕ್ಷಿ, ಮುಖಂಡರಾದ ನಿರ್ಮಲಾ, ಗೀತಾ, ರೇಣುಕಮ್ಮ, ಅಶ್ವಿನಿ, ಜಿಲ್ಲಾ ಸಂಚಾಲಕ ಆವರಗೆರೆ ವಾಸು, ಎಐವೈಎಫ್ ಮುಖಂಡ ಕೆರನಹಳ್ಳಿ ರಾಜು, ಸುಶೀಲಮ್ಮ, ಭರಮಕ್ಕ, ಬಿಸಿಯೂಟ ತಯಾರಕ ರ ಮುಖಂಡರಾದ ಸರೋಜಾ, ಜ್ಯೋತಿ ಲಕ್ಷ್ಮಿ, ಪದ್ಮಾ, ಸುಭದ್ರಮ್ಮ, ಮಂಜುಳಾ ಇತರರಿದ್ದರು.
---