ಜಿಲ್ಲೆ

ಕೇಂದ್ರ ಬಜೆಟ್ ವಿರುದ್ಧ ಸಿಐಟಿಯು ಪ್ರತಿಭಟನೆ

ಮೈಸೂರು: ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ವತಿಯಿಂದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಜನವಿರೋಧಿಯಾಗಿದೆ. ರಾಷ್ಟ್ರೀಯ ಆರ್ಥಿಕತೆಯ ಲೂಟಿಯ ನೀಲಿನಕಾಶೆಗೆ ಮುದ್ರೆಯಾಗಿದೆ ಎಂದು ಕಿಡಿಕಾರಿದರು.

ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್. ವರಲಕ್ಷ್ಮೀ ಮಾತನಾಡಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ನಿರ್ಲಜ್ಜವಾಗಿ ಕಾರ್ಪೋರೇಟ್, ಜನವಿರೋಧಿ ಧೋರಣೆಯಲ್ಲಿ ನಿಷ್ಠುರವಾದ ಕಾಯ್ದುಕೊಂಡಿದೆ. ಜನಪರ, ಅಭಿವೃದ್ಧಿ ವಿರುದ್ಧವಾಗಿದೆ. ಈ ಬಜೆಟ್ ಜನರನ್ನು ಮೋಸಗೊಳಿಸುವ ಉಪಕ್ರಮವಾಗಿದೆ. ಜನಸಾಮಾನ್ಯರ ಜೀವನ, ಜೀವನೋಪಾಯದ ಮೇಲೆ ವಿನಾಶಕಾರಿ ಪರಿಣಾಮ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಗುಣಮಟ್ಟದ ಉದ್ಯೋಗ ಸೃಷ್ಟಿಗೆ, ರಾಷ್ಟ್ರೀಯ ಬೊಕ್ಕಸಕ್ಕೆ ಸಂಪತ್ತು ಸೃಷ್ಟಿಗೆ ಮೌಲ್ಯಯುತವಾದ ಏನು ಕೊಡುಗೆ ನೀಡಿಲ್ಲ. ನರೇಂದ್ರ ಮೋದಿ ಸರ್ಕಾರದಲ್ಲಿ ಆಡಳಿತದ ನೀತಿ ಪಕ್ಷಪಾತದಿಂದ ಕಾರ್ಪೋರೇಟ್ ಕಂಪನಿಗಳು ಕಾನೂನುಬಾಹಿರ ಸಂಪತ್ತನ್ನು ಗಳಿಸಲು ಅನುಕೂಲ ಕಲ್ಪಿಸಿಕೊಡಲಾಗಿದೆ ಎಂದು ದೂರಿದರು.

ಗ್ರಾಮೀಣದಿಂದ ನಗರಾಭಿವೃದ್ಧಿ, ರಸ್ತೆಯಿಂದ ಬಾಹ್ಯಾಕಾಶ ತಂತ್ರಜ್ಞಾನದ ವರೆಗೆ ಪ್ರತಿಯೊಂದು ವಲಯದಲ್ಲೂ ಆರ್ಥಿಕತೆಯ ಪ್ರತಿಯೊಂದು ಅಂಶಗಳಲ್ಲಿ ಖಾಸಗೀಕರಣದ ವೇಗ ಮತ್ತಷ್ಟು ಹೆಚ್ಚಾಗಿದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಮಾದರಿಯ ಮೋಸದ ನಾಮಕರಣದಡಿ ಇದು ನಡೆಯುತ್ತಿದೆ ಎಂದು ಕಿಡಿಕಾರಿದರು. ಪ್ರಧಾನ ಕಾರ್ಯದರ್ಶಿ ಎನ್.ಕೆ.ಬಾಲಾಜಿರಾವ್ ಇತರರಿದ್ದರು.