ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆ.ಆರ್.ನಗರದಲ್ಲಿ ವಿದ್ಯಾರ್ಥಿಗಳು ಮತ್ತು ಓದುಗರು ಜಿಲ್ಲಾ ಗ್ರಂಥಾಲಯ ನಿರ್ದೇಶಕ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು. ಕೋಳಿಪ್ರಕಾಶ್, ಎಚ್.ಎಸ್.ರಕ್ಷಿತ್, ಗಣೇಶ್, ಬಸವರಾಜು, ಕುಮಾರ್, ಸಚಿನ್, ಪ್ರಸನ್ನ, ಪ್ರದೀಪ, ರಾಜೇಶ್, ಸುದೀಪ, ಕೃಷ್ಣಯ್ಯ, ಶಿವಕುಮಾರ್, ರಮ್ಯ, ಅರ್ಶಿತ, ಯಮುನಾ, ಪರಿಯನಾ ಬಾನು, ಆಶಾ, ಪಿಎಸ್‌ಐ ಸ್ವಾಮಿನಾಯಕ ಇದ್ದರು. 
ಜಿಲ್ಲೆ

ಕೇಂದ್ರ ಗ್ರಂಥಾಲಯಕ್ಕೆ ಮೂಲ ಸೌಕರ್ಯ ಕಲ್ಪಿಸಿ

ಕೆ.ಆರ್.ನಗರ: ಪಟ್ಟಣದಲ್ಲಿರುವ ಕೇಂದ್ರ ಗ್ರಂಥಾಲಯಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಮಂಗಳವಾರ ವಿದ್ಯಾರ್ಥಿಗಳು ಗ್ರಂಥಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಪತ್ರಕರ್ತರ ಭವನದ ಹಿಂದಿರುವ ಗ್ರಂಥಾಲಯಕ್ಕೆ ಬಾಗಿಲು ಮುಚ್ಚಿ ಧರಣಿ ಕುಳಿತ ನೂರಾರು ವಿದ್ಯಾಥಿ ಗರ್ಳು, ಬೇಡಿಕೆ ಈಡೇರುವವರೆಗೂ ಬಾಗಿಲು ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಗ್ರಂಥಾಲಯ ಜಿಲ್ಲಾ ನಿರ್ದೇಶಕ ಮಂಜುನಾಥ್ ಅವರಿಗೆ ಧರಣಿ ನಿರತರು ಅಹವಾಲು ಸಲ್ಲಿಸಿದರು.

ವಿದ್ಯಾರ್ಥಿ ಮುಖಂಡ ಎಚ್.ಎಸ್.ರಕ್ಷಿತ್ ಮಾತನಾಡಿ, ಗ್ರಂಥಾಲಯ ನಿಗದಿತ ಸಮಯಕ್ಕೆ ತೆರೆಯುತ್ತಿಲ್ಲ. ಅಲ್ಲದೆ ಸಮಯಕ್ಕೂ ಮುಂಚೆಯೇ ಬಾಗಿಲು ಮುಚ್ಚುತ್ತಾರೆ. ಕುಡಿಯುವ ನೀರು ಹಾಗೂ ಹೆಚ್ಚಿನ ಶೌಚಗೃಹವಿಲ್ಲದೆ ತೊಂದರೆಯಾಗಿದೆ. ಕುಳಿತು ಓದಲು ಸೂಕ್ತ ಆಸನಗಳ ವ್ಯವಸ್ಥೆ ಇಲ್ಲವಾಗಿದೆ. ಹಳೆಯ ಸಾಹಿತ್ಯ ಮತ್ತು ಕಾದಂಬರಿ ಪುಸ್ತಕಗಳೇ ಹೆಚ್ಚಾಗಿದ್ದು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲು ಉತ್ತಮ ಪುಸ್ತಕಗಳ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಇ- ಗ್ರಂಥಾಲಯಕ್ಕಾಗಿ ನೀಡಲಾದ ಟ್ಯಾಬ್‌ಗಳನ್ನು ಇತ್ತೀಚೆಗೆ ಬಳಕೆಗೆ ಕೊಡಲಾಗುತ್ತಿದ್ದು, ಸೂಕ್ತ ವೈ-ಫೈ ವ್ಯವಸ್ಥೆ ಇಲ್ಲ. ಅಲ್ಲದೆ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು ಮೊಬೈಲ್ ಟಾರ್ಚ್ ಹಿಡಿದು ಓದುವ ದುಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.

ತಾತ್ಕಾಲಿಕ ಉದ್ಯೋಗ ನೀಡಲು 5 ಲಕ್ಷ ರೂ. ಲಂಚದ ಬೇಡಿಕೆ ಇಟ್ಟ ಗ್ರಂಥಪಾಲಕಿ ವಾಣಿ ಅವರ ಮೇಲೆ ಕ್ರಮಕೈಗೊಳ್ಳುವಂತೆ ಗ್ರಂಥಾಲಯ ಸಹಾಯಕಿ ಆಶಾ ಮಂಜುನಾಥ್ ಅವರಿಗೆ ದೂರು ನೀಡಿದರು.

ಪುರಸಭಾ ಅಧ್ಯಕ್ಷ ಕೋಳಿ ಪ್ರಕಾಶ್ ಮಾತನಾಡಿ, ನಿಗದಿತ ಅವಧಿಗೆ ಗ್ರಂಥಾಲಯ ತೆರೆಯಲು ಹಾಗೂ ಮುಚ್ಚಲು ತೊಂದರೆಯಾಗುತ್ತಿದ್ದು, ಸ್ಥಳೀಯರನ್ನೇ ಈ ಕೆಲಸಕ್ಕೆ ನೇಮಕ ಮಾಡಬೇಕು. ಹೆಚ್ಚುವರಿ ಸಿಬ್ಬಂದಿ ಅವಶ್ಯವಿದ್ದಲ್ಲಿ ಪುರಸಭೆಗೆ ಮನವಿ ಸಲ್ಲಿಸಿದರೆ ಅಗತ್ಯ ಕ್ರಮ ವಹಿಸಲಾಗುವುದು. ಅಲ್ಲದೆ ಉದ್ಯೋಗ ನೀಡಲು ಸಿಬ್ಬಂದಿ ಬಳಿ ಲಂಚದ ಬೇಡಿಕೆ ಇಟ್ಟಿರುವ ಗ್ರಂಥಪಾಲಕಿ ವಾಣಿ ಅವರನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದರು.

ಅಹವಾಲು ಸ್ವೀಕರಿಸಿ ಮಾತನಾಡಿದ ಮಂಜುನಾಥ್, ಪ್ರತಿವಾರ ಸಂಪ್ ಸ್ವಚ್ಛಗೊಳಿಸುವುದರ ಜತೆಗೆ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿನಿಯರು ಹಾಗೂ ಮಹಿಳಾ ಓದುಗರಿಗೆ ಪ್ರತ್ಯೇಕ ಶೌಚಗೃಹ ಆಗುವವರೆಗೆ ಸಿಬ್ಬಂದಿಗಿರುವ ಶೌಚಗೃಹವನ್ನೇ ಬಳಸಲು ಅವಕಾಶ ನೀಡುವಂತೆ ಸ್ಥಳದಲ್ಲಿದ್ದ ಗ್ರಂಥಪಾಲಕಿಗೆ ಸೂಚಿಸಿದರು.

ನಿಗದಿತ ಸಮಯಕ್ಕೆ ಗ್ರಂಥಾಲಯ ತೆರೆಯಬೇಕು ಹಾಗೂ ಮುಚ್ಚಬೇಕು. ಸರ್ಕಾರಿ ರಜೆ ದಿನಗಳಲ್ಲಿ ಗಂಥಾಲಯ ತೆರೆಯಲು ಅವಕಾಶವಿಲ್ಲ. ಆದರೆ ಸರ್ಕಾರಕ್ಕೆ ಈ ಸಂಬಂಧ ಮನವಿ ಸಲ್ಲಿಸಲಾಗುವುದು. ಜತೆಗೆ ಲಂಚದ ಬೇಡಿಕೆ ಆರೋಪಕ್ಕೆ ಸಿಲುಕಿರುವ ಗ್ರಂಥಪಾಲಕಿಗೆ ನೋಟಿಸ್ ನೀಡುವ ಜತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ಪಿಎಸ್‌ಐ ಸ್ವಾಮಿನಾಯಕ ವಿದ್ಯಾರ್ಥಿಗಳಾದ ಗಣೇಶ್, ಬಸವರಾಜು, ಕುಮಾರ್, ಸಚಿನ್, ಪ್ರಸನ್ನ, ಪ್ರದೀಪ, ರಾಜೇಶ್, ಸುದೀಪ, ಕೃಷ್ಣಯ್ಯ, ಶಿವಕುಮಾರ್, ರಮ್ಯ, ಅರ್ಶಿತ, ಯಮುನಾ, ಪರಿಯನಾ ಬಾನು, ಆಶಾ ಇತರರು ಪ್ರತಿಭಟನೆಯಲ್ಲಿ ಇದ್ದರು.