ಜಿಲ್ಲೆ

ಕೇಂದ್ರ ಗೃಹಸಚಿವರ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ

ಮೈಸೂರು: ಅಂಬೇಡ್ಕರ್ ವಿರುದ್ಧ ಕೇಂದ್ರ ಸಚಿವ ಅಮಿತ್ ಷಾ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ವತಿಯಿಂದ ಪುರಭವನದ ಎದುರಿನ ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಯಿತು.

ಇವರ ಹೇಳಿಕೆ ಆರ್‌ಎಸ್‌ಎಸ್, ಬಿಜೆಪಿಯ ಜಾತಿವಾದಿ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಇದು ಅಂಬೇಡ್ಕರ್ ಅವರನ್ನು ಅವಕಾಶವಾದಿಯಾಗಿ ಸ್ವಾಧೀನಪಡಿಸಿಕೊಳ್ಳುವಾಗಲೂ ಅವರನ್ನು ದುರ್ಬಲಗೊಳಿಸುತ್ತಿದೆ. ಬಿಜೆಪಿ ಸರ್ಕಾರವು ನಿರಂತರವಾಗಿ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ದೂರಿದರು.

ಶಿಕ್ಷಣ ಕ್ಷೇತ್ರದಲ್ಲೂ ಮೋದಿ ಸರ್ಕಾರವು ಬಹಿರಂಗವಾಗಿ ದಲಿತ ವಿರೋಧಿ ಧೋರಣೆ ಪ್ರದರ್ಶಿಸುತ್ತಿದೆ. ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನದ ಮೊತ್ತ ಅರ್ಧಕ್ಕಿಂತ ಕಡಿಮೆ ಮಾಡಿದೆ.

ಶಿಕ್ಷಣ ಶುಲ್ಕ ಹೆಚ್ಚಿಸಿ ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಇನ್ನಷ್ಟು ದುಬಾರಿಯಾಗಿಸಿದೆ. ಇದರಿಂದಾಗಿ ಇವರ ಉನ್ನತ ಶಿಕ್ಷಣ ಪ್ರವೇಶಿಸಲಾಗುತ್ತಿಲ್ಲ ಎಂದು ಕಿಡಿಕಾರಿದರು.

ಆರ್‌ಎಸ್‌ಎಸ್, ಬಿಜೆಪಿ ಸರ್ಕಾರವು ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ದಮನ ಮಾಡುತ್ತಿದೆ. ಐಐಟಿ, ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಅಹಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಾಗಿದೆ ಎಂದು ಕಳವಳವ್ಯಕ್ತಪಡಿಸಿದರು. ಷಾ ಅವರು ಕೂಡಲೇ ರಾಜೀನಾಮೆ ನೀಡಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಚಿರಾಗ್ ಎಸ್.ಕೆ.ಮೂರ್ತಿ, ಪ್ರಜ್ವಲ್, ಎಚ್.ಭರತ್, ಗಿರೀಶ್ ಬೆಂಡರವಾಡಿ, ಡಿ.ಅಭಿ ಇನ್ನಿತರರಿದ್ದರು.