ಜಿಲ್ಲೆ

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಮನೆ ಮನೆ ಗೋಷ್ಠಿ

ಅರಸೀಕೆರೆ ಗ್ರಾಮಾಂತರ: ನಗರದ ಶ್ರೀನಗರ ಬಡಾವಣೆಯ ಕೆ.ಬಿ.ರುದ್ರೇಶ್ ಅವರ ಅನುಗ್ರಹ ನಿವಾಸದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕ ವತಿಯಿಂದ ಶನಿವಾರ 12ನೇ ಮನೆ ಮನಗಳ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಮಂಜುನಾಥ್ ವಹಿಸಿ ಮಾತನಾಡಿ, ಕನ್ನಡ ನಾಡು, ನುಡಿ ಬಗ್ಗೆ ನಮ್ಮ ಹೋರಾಟ ಸದಾ ಇರಬೇಕು ಎಂದು ತಿಳಿಸಿದರು.

ಕತೆಗಾರ ಪ್ರಶಾಂತ್ ಲಾಳನಕೆರೆ ಮಾತನಾಡಿ, ‘ಮೊಬೈಲ್ ಬಿಟ್ಟು ಬನ್ನಿ ಮಾತನಾಡೋಣ’ ಎನ್ನುವ ವಿಷಯ ಕುರಿತಾಗಿ ಇಂದಿನ ಮಕ್ಕಳು ಮತ್ತು ಯುವ ಜನಾಂಗ ತಮ್ಮ ಅಮೂಲ್ಯ ಸಮಯವನ್ನು ಕಳೆದುಕೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕರಾದ ರಾಮಸ್ವಾಮಿ, ಸುಲೋಚನಬಾಯಿ, ಕಣಕಟ್ಟೆ ಕುಮಾರ್, ತೇಜಸ್ ಯಾದಾಪುರ, ರಾಮಕೃಷ್ಣ ಮಾತನಾಡಿದರು.

ಕೆ.ಸಿ.ನಟರಾಜ್, ಅಮೃತ್ ಜೆಟ್ಟಿ, ದರ್ಶನ್, ಸೈಪುಲ್ಲಾ ಕವಿಗೋಷ್ಠಿಯಲ್ಲಿ ಕವನ ವಾಚಿಸಿದರು.

ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125 ಅಂಕ ಪಡೆದ ಸುಹಾಸ್ ಭಾರಧ್ವಾಜ್ ಹಾಗೂ ಕು.ಚಿನ್ಮಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕದ ಕಾರ್ಯದರ್ಶಿ ಡಾ.ಬಸವರಾಜ್, ಎನ್.ಮಂಜುಳಾ, ಪದಾಧಿಕಾರಿಗಳಾದ ಡಾ.ಹರೀಶ್‌ಕುಮಾರ್, ರವಿಶಂಕರ್, ಕರವೇ ಕಾರ್ಯದರ್ಶಿ ಮುರುಂಡಿ ಪ್ರಸಾದ್ ಮತ್ತಿತರರು ಹಾಜರಿದ್ದರು.