ಚಿತ್ರದುರ್ಗ: ಕೇಂದ್ರ ಅನುದಾನ ಕೊಡುತ್ತದೆ ಎಂದು ಭದ್ರಾ ಮೇಲ್ದಂಡೆ ಯೋಜನೆ ಮಂಜೂರು ಮಾಡಲಾಗಿತ್ತೇ ಎಂದು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
2003ರಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅಂದಾಜು 2,813 ಕೋಟಿ ರೂ. ವೆಚ್ಚದ ಈ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಈವರೆಗೆ ಅಂದಾಜು 10,185 ಕೋಟಿ ರೂ. ಖರ್ಚಾಗಿದೆ. ಇನ್ನೂ ಅಂದಾಜು 12 ಸಾವಿರ ಕೋಟಿ ರೂ.ಬೇಕೆಂಬ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಚಂದ್ರಪ್ಪ, ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರ ಕಾಲ, 1957ರಿಂದಲೂ ಬರಗಾಲ ಪೀಡಿತ ಜಿಲ್ಲೆಗೆ ಈ ಯೋಜನೆ ಬೇಕೆಂದು ದೊಡ್ಡ ಮಟ್ಟದಲ್ಲಿ ಹೋರಾಟಗಳಾಗಿವೆ. ಯೋಜನೆ ಪೂರ್ಣಗೊಳಿಸಲು 25 ವರ್ಷಗಳು ಬೇಕೆ ಎಂದು ಪ್ರಶ್ನಿಸಿದರು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಕೇಂದ್ರ ಅನುದಾನ ಬಿಡುಗಡೆ ಮಾಡಿಲ್ಲವೆಂದು ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳಿಗೆ ನೀರು ಕೊಡುವುದು ವಿಳಂಬವಾಗಬೇಕೆ? ಈ ಜಿಲ್ಲೆಗಳ ಕೆರೆಗಳಿಗೆ ಯಾವಾಗ ನೀರು ತುಂಬಿಸುವುದು ಎಂದು ಪ್ರಶ್ನಿಸಿದ್ದಾರೆ.
ಸಚಿವರು 2028ರೊಳಗೆ ಯೋಜನೆ ಪೂರ್ಣಗೊಳಿಸುವ ಭರವಸೆ ಕೊಟ್ಟಿದ್ದಾರೆ. ಕೇಂದ್ರದ ಘೋಷಿತ ಅನುದಾನ 5300 ಕೋಟಿ ರೂ. ಬಿಡುಗಡೆ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವೂ ಪ್ರಯತ್ನ ನಡೆಸಿದೆ. ಆದ್ಯತೆ ಮೇರೆಗೆ ಕಾಮಗಾರಿ ಚುರುಕುಗೊಳಿಸುವುದಾಗಿ ಸಚಿವರು ಭರವಸೆ ಕೊಟ್ಟಿದ್ದಾರೆ. 2028 ರೊಳಗೂ ಪೂರ್ಣಗೊಳ್ಳದಿದ್ದರೆ ಯೋಜನಾ ವೆಚ್ಚ ಇನ್ನಷ್ಟ ಹೆಚ್ಚಾಗಲಿದೆ ಎಂದು ಸದನದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿರುವುದಾಗಿ ಚಂದ್ರಪ್ಪ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.