ಜಿಲ್ಲೆ

ಕೆಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ

ಧಾರವಾಡ: ಪ್ರತಿಷ್ಠಿತ ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ (ಕೆಸಿಸಿ) ಬ್ಯಾಂಕ್ ನೂತನ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಮುಖಂಡ, ಹು-ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಿಜೆಪಿ ಬೆಂಬಲಿತ ಮಲ್ಲಿಕಾರ್ಜುನ ಹೊರಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಬಾಪುಗೌಡ ಪಾಟೀಲ ಕಳೆದ ತಿಂಗಳು ರಾಜೀನಾಮೆ ನೀಡಿದ್ದರಿಂದ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕಾಗಿ ನಗರದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಆಯ್ಕೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಹೊರಕೇರಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾ ಅಧಿಕಾರಿ ಎಂ.ಬಿ. ಪೂಜಾರ ಅವರು ಹೊರಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೊಷಿಸಿದರು. ಬಳಿಕ ಉಪಾಧ್ಯಕ್ಷ ಎಸ್.ವೈ. ಪಾಟೀಲ, ನಿರ್ದೇಶಕರಾದ ಗಂಗಾಧರ ಸಾತಣ್ಣವರ, ಶಿವಕುಮಾರಗೌಡ ಪಾಟೀಲ, ಮಂಜುನಾಥ ಮುರಳ್ಳಿ, ಜಿ.ಪಿ.ಪಾಟೀಲ, ಇತರರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ, ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಶಿವಾನಂದ ಹೂಗಾರ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಎರಡೂವರೆ ವರ್ಷಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾದಾಗಲೇ ಮಲ್ಲಿಕಾರ್ಜುನ ಹೊರಕೇರಿ ಆಕಾಂಕ್ಷಿಯಾಗಿದ್ದರು. ಆದರೆ, ಕೊನೇ ಕ್ಷಣದಲ್ಲಿ ಬಾಪುಗೌಡ ಪಾಟೀಲ ಅಧ್ಯಕ್ಷರಾದರು. ಆದರೆ, ಈ ಬಾರಿ ಹಿರಿಯರ ಹಾಗೂ ನಿರ್ದೇಶಕರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿ ಕೆಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

2018ರಲ್ಲಿ ನಡೆದ ಚುನಾವಣೆಯಲ್ಲಿ ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಬಿಜೆಪಿ ಬೆಂಬಲಿತ 11 ಹಾಗೂ ಕಾಂಗ್ರೆಸ್ ಬೆಂಬಲಿತ 9 ಮಂದಿ ಆಯ್ಕೆಯಾಗಿದ್ದರು. ಚುನಾವಣೆ ನಡೆಯುವಾಗ ಬಿಜೆಪಿಯಲ್ಲಿದ್ದ ಬಾಪುಗೌಡ ಪಾಟೀಲ, ಆಯ್ಕೆಯಾದ ಮೇಲೆ ಕಾಂಗ್ರೆಸ್ ಸೇರಿದ್ದರು. ನಂತರ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಕೆಸಿಸಿ ಬ್ಯಾಂಕ್ ಕಾಂಗ್ರೆಸ್ ವಶಕ್ಕೆ ಎಂದು ವಿಶ್ಲೇಷಿಸಲಾಗಿತ್ತು. ಈಗ ಬ್ಯಾಂಕ್​ನಲ್ಲಿ ಬಿಜೆಪಿ ಆಡಳಿತ ಬಂದಂತಾಗಿದೆ.