ಕೊಳ್ಳೇಗಾಲ: ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ಮೈದಾನದಲ್ಲಿ ಮಾಜಿ ಶಾಸಕ ದಿವಗಂತ ಎಸ್.ಜಯಣ್ಣ ಸ್ಮರಣಾರ್ಥ ಆಯೋಜಿಸಿದ್ದ 3 ದಿನಗಳ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ(ಜಯಣ್ಣ ಕಪ್-2025)ಯ ಫೈನಲ್ ಪಂದ್ಯದಲ್ಲಿ ಭಾನುವಾರ ಕೆಸಿಸಿ ಕೊಳ್ಳೇಗಾಲ ತಂಡ ಪ್ರಥಮ ಸ್ಥಾನ ಪಡೆದು ಗೆಲುವು ಸಾಧಿಸಿತು. ಆರ್‌ಸಿಬಿ ಕೊಳ್ಳೇಗಾಲ ತಂಡ ರನ್ನರ್‌ಅಪ್ ಆಗಿ ಹೊರಹೊಮ್ಮಿತು.
ಮಾಜಿ ಶಾಸಕ ದಿ.ಎಸ್.ಜಯಣ್ಣ ಅವರ ಗೆಳೆಯರ ಬಳಗ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಜಿಲ್ಲೆಯ ನಾನಾ ಕಡೆಗಳಿಂದ ಒಟ್ಟು 16 ತಂಡಗಳು ಪಾಲ್ಗೊಂಡ ಆಟಗಾರರು ರೋಚಕ ಪ್ರದರ್ಶನ ನೀಡಿದರು. ಫೈನಲ್ ಪಂದ್ಯದಲ್ಲಿ ಎದುರಾಳಿ ತಂಡವನ್ನು ಮಣಿಸಿದ ಕೆಸಿಸಿ ಕೊಳ್ಳೇಗಾಲ ತಂಡ ಚಾಂಪಿಯನ್ ಪಟ್ಟ ಪಡೆದು 25 ಸಾವಿರ ರೂ. ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಯನ್ನು ಸ್ವೀಕರಿಸಿತು. ರನ್ನರ್‌ಅಪ್ ತಂಡವಾದ ಆರ್‌ಸಿಬಿ ಕೊಳ್ಳೇಗಾಲ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ 15 ಸಾವಿರ ರೂ.ಬಹುಮಾನ ಪಡೆಯಿತು.
ಗೆಲುವು ಸಾಧಿಸಿದ ತಂಡಕ್ಕೆ ಬಹುಮಾನ ವಿತರಿಸಿದ ಬಳಿಕ ಕೊಳ್ಳೇಗಾಲ ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ. ಪ್ರಸ್ತುತ ಪ್ರತಿಯೊಬ್ಬರೂ ಒತ್ತಡದ ಜೀವನದಲ್ಲಿ ಇರುತ್ತಾರೆ. ಈ ನಡುವೆ ದಿನದಲ್ಲಿ ಕೆಲ ಸಮಯ ಕ್ರೀಡಾ ಚಟುವಟಿಕೆ ಹಾಗೂ ವ್ಯಾಯಾಮದಲ್ಲಿ ಪಾಲ್ಗೊಂಡರೆ ಹೆಚ್ಚು ಕಾಲ ಆರೋಗ್ಯವಂತರಾಗಿರಲು ಸಾಧ್ಯವಿರುತ್ತದೆ ಎಂದು ಹೇಳಿದರು.
ಯುವಕರು ಓದಿನ ಜತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಹೆಚ್ಚಿನ ಮೊಬೈಲ್ ಬಳಕೆ ಹಾಗೂ ದುಶ್ಚಟಗಳಿಂದ ದೂರವಿದ್ದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಮಾಜಿ ಶಾಸಕ ದಿ.ಎಸ್.ಜಯಣ್ಣ ಅವರ ಹೆಸರಿನಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಯನ್ನು ಆಯೋಜನೆ ಮಾಡಿರುವುದು ಪ್ರಶಂಸನೀಯ ಎಂದರು. ಕ್ರಿಕೆಟ್ ಪಂದ್ಯಾವಳಿ ಆಯೋಜಕರಾದ ದೀಪಕ್ ಚಂದ್ರಶೇಖರ್, ಶಿವಕುಮಾರ್, ಸುಹಾಸ್, ಸಚಿನ್ ಇತರರು ಇದ್ದರು.