ಹನೂರು: ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಪಟ್ಟಣದಿಂದ ಲೊಕ್ಕನಹಳ್ಳಿಗೆ ತೆರಳುವ ತಟ್ಟೆಹಳ್ಳ ಸೇತುವೆಯ ಬಳಿ ಸಮತಟ್ಟು ಮಾಡಲಾಗಿದ್ದ ಮಣ್ಣಿನ ರಸ್ತೆ ಬುಧವಾರ ಕೆಸರುಮಯವಾಗಿ ವಾಹನ ಸವಾರರು ಅನ್ಯ ಮಾರ್ಗವಾಗಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿತ್ತು.
ಎರಡು ವರ್ಷಗಳ ಹಿಂದೆ 1.5 ಕೋಟಿ ರೂ. ವೆಚ್ಚದಲ್ಲಿ ತಟ್ಟೆಹಳ್ಳದ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಕೆಲವು ಕಾರಣಾಂತರದಿಂದ ನೆನಗುದಿಗೆ ಬಿದ್ದಿದ್ದು, ಇದೀಗ 3 ತಿಂಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಸೇತುವೆಯ ಆಚೀಚೆ ಸಮತಟ್ಟು ಮಾಡಿರಲಿಲ್ಲ. ಇದರಿಂದ ವಾಹನಗಳು ಸಮೀಪದ ಮಣ್ಣಿನ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಈ ಬಗ್ಗೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಜವಾಬ್ದಾರಿ ಹೊತ್ತವರು ಕಾಟಾಚಾರವೆಂಬಂತೆ ಕೆಂಪುಮಿಶ್ರಿತ ಮೆಕ್ಕಲು ಮಣ್ಣನ್ನು ಸುರಿದು ಸಮತಟ್ಟು ಮಾಡಿದ್ದರು. ಆದರೆ, ಇದೀಗ ರಡು ದಿನಗಳ ಕಾಲ ಸುರಿದ ಭಾರಿ ಮಳೆಗೆ ರಸ್ತೆ ಕೆಸರು ಗದ್ದೆಯಂತಾಯಿತು. ಪರಿಣಾಮ ವಾಹನಗಳು ಕೆಸರಿಗೆ ಸಿಲುಕುವಂತಾಯಿತು. ಇದನ್ನರಿತ ಲೊಕ್ಕನಹಳ್ಳಿ-ಹನೂರು ಕಡೆಗೆ ತೆರಳುವ ವಾಹನ ಸವಾರರು ಉದ್ದನೂರು, ಬೆಳತ್ತೂರು ಗ್ರಾಮದ ಮಾರ್ಗವಾಗಿ ಸಂಚರಿಸಿದರು.
ಈ ಮಾರ್ಗವು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹಾಗಾಗಿ, ಈ ಮಾರ್ಗದಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ ಜವಬ್ದಾರಿ ಹೊತ್ತವರು ಸೇತುವೆಯ ಆಚೀಚೆ ಮಣ್ಣು ಸುರಿದು ಸಮತಟ್ಟು ಮಾಡಿದ್ದಾರಷ್ಟೇ. ಇದರಿಂದ ರಸ್ತೆ ಮಳೆ ಬಂದಾಗ ಕೆಸರು ಮಯವಾಗುತ್ತಿದೆ. ಸಾರ್ವಜನಿಕರು ಸಂಚರಿಸಲು ಸಮಸ್ಯೆಯಾಗಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸೇತುವೆಯ ಆಸು-ಪಾಸಿನ ರಸ್ತೆಯನ್ನು ಡಾಂಬರೀಕರಣಗೊಳಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಪಟ್ಟಣದ ನಿವಾಸಿ ಮಹೇಶ್ ಒತ್ತಾಯಿಸಿದ್ದಾರೆ.