ನಾಲತವಾಡ ಸಮೀಪದ ಸುಲ್ತಾನಪುರ ಗ್ರಾಮದಲ್ಲಿ ಕೆಸರುಗದ್ದೆಯಾದ ರಸ್ತೆಯನ್ನು ಗ್ರಾಮಸ್ಥರು ತೋರಿಸುತ್ತಿರುವುದು 
ಜಿಲ್ಲೆ

ಕೆಸರುಗದ್ದೆಯಾದ ಸುಲ್ತಾನಪುರ ರಸ್ತೆಗಳು

ನಾಲತವಾಡ: ಕಳೆದ ಹಲವು ವರ್ಷಗಳಿಂದ ಸ್ಥಳೀಯ ಗ್ರಾಪಂ ಸೇರಿದಂತೆ ಜನಪ್ರತಿನಿಧಿಗಳಿಗೆ ಸುಲ್ತಾನಪುರ ಗ್ರಾಮಕ್ಕೆ ಸಿಸಿ ರಸ್ತೆಗಳನ್ನು ನಿರ್ಮಿಸಿ ಎಂದು ಅಂಗಲಾಚಿದರೂ ಕ್ಯಾರೆ ಎನ್ನಲಿಲ್ಲ. ಈಗ ಮಳೆಯಿಂದ ರಸ್ತೆಗಳೆಲ್ಲಾ ಕೆಸರುಗದ್ದೆಗಳಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಮೀಪದ ಬಿಜ್ಜೂರ ಗ್ರಾಪಂ ವ್ಯಾಪ್ತಿಯ ಕೃಷ್ಣಾ ನದಿ ತೀರದ ಸುಲ್ತಾನಪುರ ಗ್ರಾಮದ ದೇವಸ್ಥಾನಗಳಿಗೆ ಹಾಗೂ ಸದ್ಯ ಆಚರಿಸಲಾಗುತ್ತಿರುವ ಮೊಹರಂ ಹಬ್ಬದ ಅಲಾಯಿ ದೇವರ ದರ್ಶನ ಪಡೆಯಲು ಇದೇ ರಸ್ತೆಯಲ್ಲಿ ಸಂಚರಿಸಬೇಕಿದೆ. ಜನತೆ ಇಲ್ಲಿ ಸಂಚಾರಕ್ಕೆ ಹಿಂದೇಟು ಹಾಕಿ ಆಡಳಿತವರ್ಗಕ್ಕೆ ಶಾಪ ಹಾಕುವಂತಾಗಿದೆ.

ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳಿವೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ವಾಸುತ್ತಿದ್ದಾರೆ. ಕೆಸರುಗದ್ದೆಯಂತಿರುವ ರಸ್ತೆಯಲ್ಲಿ ಜಮೀನುಗಳಿಗೆ ತೆರಳಲು ಚಕ್ಕಡಿಗಳನ್ನು ಎಳೆದೊಯ್ಯಲು ಎತ್ತುಗಳು ಪರದಾಡುತ್ತಿವೆ. ಕೆಲವೊಮ್ಮೆ ಎತ್ತುಗಳು ಜಾರಿ ಬಿದ್ದ ಉದಾಹರಣೆಗಳಿವೆ. ಈ ರಸ್ತೆಯನ್ನು ಕೂಡಲೇ ಸಿಸಿ ರಸ್ತೆಯನ್ನಾಗಿಸಬೇಕು ಎಂದು ಗ್ರಾಮಸ್ಥರಾದ ಈರಣ್ಣ ನಾಡಗೌಡ, ಗ್ರಾಪಂ ಸದಸ್ಯ ಲಕ್ಷ್ಮಣ ರಬ್ಲರ್ ಇತರರು ಒತ್ತಾಯಿಸಿದ್ದಾರೆ.