ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲಾ ವತಿಯಿಂದ ಮೂರನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ. 
ಜಿಲ್ಲೆ

ಕೆಸರುಗದ್ದೆ ಕ್ರೀಡಾಕೂಟದಿಂದ ದೈಹಿಕ ಶಕ್ತಿ ವೃದ್ಧಿ

ನಾಪೋಕ್ಲು: ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಗಟ್ಟಿ ಆದಾಗ ಮಾತ್ರ ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಕಾಫಿ ಬೆಳೆಗಾರ ಹಾಗೂ ಕೊಡಗು ಕಾಫಿ ಬೆಳೆಗಾರರ ಸಂಘದ ನಿರ್ದೇಶಕ ನೂರಂಬಾಡದ ಎನ್. ಎಸ್. ಉದಯ ಶಂಕರ್ ಹೇಳಿದರು.

ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆ ವತಿಯಿಂದ ಸೋಮವಾರ ಶೀವಚಳಿಯಟಡ ಜಗದೀಶ್ ಮತ್ತು ವಿಜು ಪೂಣಚ್ಚ ಅವರ ಗದ್ದೆಗಳಲ್ಲಿ ಏರ್ಪಡಿಸಲಾಗಿದ್ದ ಮೂರನೇ ವರ್ಷದ ಸಿಬಿಎಸ್​ಸಿ ಸಹೋದರ ಒಕ್ಕೂಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೆಸರುಗದ್ದೆ ಕ್ರೀಡಾಕೂಟಗಳು ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ. ಅಂಕುರ್ ಪಬ್ಲಿಕ್ ಶಾಲೆಯು ಪ್ರತಿ ವರ್ಷ ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳ ಸ್ಪರ್ಧಾಮನೋಭಾವನೆಯನ್ನು ಜಾಗೃತಗೊಳಿಸುತ್ತದೆ ಎಂದರು.

ಪ್ರಸ್ತುತ ಸನ್ನಿವೇಶದಲ್ಲಿ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ವ್ಯಸನದಲ್ಲಿ ಸಿಲುಕುತ್ತಾರೆ. ಅತಿಯಾದ ಮೊಬೈಲ್ ಬಳಕೆ ನಮ್ಮನ್ನು ತಲೆತಗ್ಗಿಸುವಂತೆ ಮಾಡುತ್ತದೆ. ಪುಸ್ತಕಗಳನ್ನು ಓದುವುದರಿಂದ ತಲೆಯೆತ್ತಿ ಮುನ್ನಡೆಯಲು ಸಾಧ್ಯ. ತಾಯಿ ಮಗುವನ್ನು ಪ್ರಪಂಚಕ್ಕೆ ಪರಿಚಯಿಸುತ್ತಾಳೆ. ಆದರೆ ತಂದೆ ಪ್ರಪಂಚವನ್ನು ಮಗುವಿಗೆ ಪರಿಚಯ ಮಾಡುತ್ತಾನೆ. ತಂದೆ ತಾಯಿಯ ಆಸೆಯಂತೆ ಗುರಿ ಮುಟ್ಟಲು ಶಿಕ್ಷಕರ ಮಾರ್ಗದರ್ಶನ ಬೇಕು. ಶಿಕ್ಷಕರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಅಂಕುರ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ರತ್ನಾ ಚರ್ಮಣ್ಣ ಮಾತನಾಡಿ, ಸಿಬಿಎಸ್​ಸಿ ಸಹೋದರ ಒಕ್ಕೂಟದ ಶಾಲೆಗಳಾದ ಮಡಿಕೇರಿಯ ಕೊಡಗು ವಿದ್ಯಾಲಯ, ಕೂಡಿಗೆಯ ಸೈನಿಕ್ ಶಾಲೆ, ಕುಶಾಲನಗರದ ಜ್ಞಾನಗಂಗಾ ಶಾಲೆ, ಅರಮೇರಿಯ ಎಸ್​ಎಂಎಸ್ ಶಾಲೆ, ಸುಳ್ಯದ ಕೆವಿಜಿ ಶಾಲೆ ಹಾಗೂ ಗೋಣಿಕೊಪ್ಪದ ನ್ಯಾಷನಲ್ ಅಕಾಡೆಮಿ ಶಾಲೆಗಳ 500 ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆ ಅಧ್ಯಕ್ಷ ಕೇಟೋಳಿರ ರಾಜಾ ಚರ್ಮಣ್ಣ , ಅಂತಾರಾಷ್ಟ್ರೀಯ ಕ್ರೀಡಾಪಟು ಪ್ರಸಾದ್ ಉಪಸ್ಥಿತರಿದ್ದರು.

ಕ್ರೀಡಾಕೂಟದ ವಿಜೇತರು

ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಕೊಡಗು ವಿದ್ಯಾಲಯ ಪ್ರಥಮ ಸ್ಥಾನ ಗಳಿಸಿದರೆ, ಕೆವಿಜಿ ಸುಳ್ಯ ಶಾಲೆ ದ್ವಿತೀಯ ಸ್ಥಾನ ಗಳಿಸಿತು. ಬಾಲಕರ ವಿಭಾಗದಲ್ಲಿ ಸುಳ್ಯದ ಕೆವಿಜಿ ಶಾಲೆ (ಪ್ರ), ಅಂಕುರ್ ಪಬ್ಲಿಕ್ ಶಾಲೆ(ದ್ವಿ), ಥ್ರೋಬಾಲ್ ಸ್ಪರ್ಧೆಯಲ್ಲಿ ಕೊಡಗು ವಿದ್ಯಾಲಯ (ಪ್ರ), ಕುಶಾಲನಗರದ ಜ್ಞಾನ ಗಂಗಾ ಶಾಲೆ (ದ್ವಿ), ಕೆಸರುಗದ್ದೆ ವಾಲಿಬಾಲ್ ಸ್ಪರ್ಧೆಯಲ್ಲಿ ಕೂಡಿಗೆಯ ಸೈನಿಕ್ ಶಾಲೆ (ಪ್ರ), ಮಡಿಕೇರಿಯ ಎಎಲ್​ಜಿ ಕ್ರೆಸೆಂಟ್ ಶಾಲೆ (ದ್ವಿ) ಸ್ಥಾನ ಗಳಿಸಿತು.

ಕೆಸರುಗದ್ದೆ ಅಥ್ಲೆಟಿಕ್ಸ್ ವಿಭಾಗ ವಿಜೇತರು : 100 ಮೀಟರ್ ಕಿರಿಯ ಬಾಲಕರ ವಿಭಾಗದಲ್ಲಿ ಸೈನಿಕ್ ಶಾಲೆಯ ವಿಶಾಲ್ ಯಾದವ್ (ಪ್ರ), ಎಂ.ಆರ್.ಆರ್ಯನ್(ದ್ವಿ), ಅಂಕುರ್ ಪಬ್ಲಿಕ್ ಶಾಲೆಯ ಬಿ.ಕೆ.ಚರ್ಮಣ್ಣ(ತೃ), ಕಿರಿಯ ಬಾಲಕಿಯರ ವಿಭಾಗದಲ್ಲಿ ಕೊಡಗು ವಿದ್ಯಾಲಯದ ತೇಜಲ್ ಬೋಪಣ್ಣ(ಪ್ರ), ಅಂಕುರ್ ಪಬ್ಲಿಕ್ ಶಾಲೆಯ ಪಿ.ಎಂ.ಮಯಾಂಕ(ದ್ವಿ), ಕೂಡಿಗೆಯ ಸೈನಿಕ್ ಶಾಲೆಯ ದೀಪ್ತಿ ಯಾದವ್(ತೃ), 100 ಮೀಟರ್ ಹಿರಿಯ ಬಾಲಕರ ವಿಭಾಗದಲ್ಲಿ ಅಂಕುರ್ ಪಬ್ಲಿಕ್ ಶಾಲೆಯ ಪಿ.ಎಂ.ಪ್ರಜ್ವಲ್ ಅಯ್ಯಪ್ಪ(ಪ್ರ), ಕೂಡಿಗೆ ಸೈನಿಕ್ ಶಾಲೆಯ ಪಿ.ಎಂ.ಪ್ರಮೋದ್(ದ್ವಿ),ಕೊಡಗು ವಿದ್ಯಾಲಯದ ಪಿ.ಸಿ.ಶ್ರೀವಿಷ್ಣುರೈ(ತೃ), ಹಿರಿಯ ಬಾಲಕಿಯರ ವಿಭಾಗದಲ್ಲಿ ಕೊಡಗು ವಿದ್ಯಾಲಯದ ಪೆರ್ಲಿನ್ ಪೊನ್ನಮ್ಮ(ಪ್ರ), ಅತ್ತೂರಿನ ಜ್ಞಾನಗಂಗಾ ಶಾಲೆಯ ಎ.ಎಸ್. ಹರ್ಷ(ದ್ವಿ), ಸುಳ್ಯದ ಕೆವಿಕೆ ಎಂ.ಕೆ.ಪ್ರತೀಕಾ(ತೃ) ಸ್ಥಾನ ಗಳಿಸಿದರು.

ಕಿರಿಯ ಬಾಲಕರ 4.100 ಮೀಟರ್ ರಿಲೇನಲ್ಲಿ ಕೂಡಿಗೆಯ ಸೈನಿಕ್ ಶಾಲೆ ಕೂಡಿಗೆ(ಪ್ರ), ಕೆವಿಕೆ ಸುಳ್ಯ (ದ್ವಿ), ನಾಪೋಕ್ಲುವಿನ ಅಂಕುರ್ ಪಬ್ಲಿಕ್​ಶಾಲೆ(ತೃ) ಸ್ಥಾನ ಪಡೆದರೆ ಕಿರಿಯ ಬಾಲಕಿಯರ 4*100 ಮೀಟರ್ ರಿಲೇನಲ್ಲಿ ಕೊಡಗು ವಿದ್ಯಾಲಯ(ಪ್ರ), ಸುಳ್ಯದ ಕೆವಿಜಿ(ದ್ವಿ) ಹಾಗೂ ಅಂಕುರ್ ಪಬ್ಲಿಕ್ ಶಾಲೆ (ತೃ) ಸ್ಥಾನ ಪಡೆಯಿತು.