ಜಿಲ್ಲೆ

ಕೆಸರಲ್ಲಿ ಬಿದ್ದು ಧರಣಿ

ಚಿಕ್ಕನಾಯಕನಹಳ್ಳಿ:ಗ್ರಾಮದ ರಸ್ತೆಗಳು ಗುಂಡಿ, ಕೆಸರು ಮಯವಾಗಿವೆ ಎಂಬುದಕ್ಕೆ ಸಾಯಾಗಿ ಕೆಸರಲ್ಲಿ ಬಿದ್ದು ಅದೇ ವೇಷದಲ್ಲಿ ಗ್ರಾಮಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಟನೆ ತಾಲೂಕಿನ ಕಂದಿಕೆರೆಯಲ್ಲಿ ಸೋಮವಾರ ನಡೆದಿದೆ.

ಕಂದಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಗೊಟ್ಟಿಗೇನಹಳ್ಳಿಯ ಸೋಮಶೇಖರ್​ ಅವರು ಕೆಸರು ಮೆತ್ತಿದ ಬಟ್ಟೆಯಲ್ಲೇ ಗ್ರಾಮಪಂಚಾಯಿತಿ ಮುಂಭಾಗ ಪ್ರತಿಭಟಿಸಿ, ನಮ್ಮ ಗೊಟ್ಟಿಗೆನಹಳ್ಳಿಯು ಕಂದಿಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಹತ್ತಾರು ವರ್ಷಗಳಿಂದ ಓಡಾಡಲು ರಸ್ತೆ ಇಲ್ಲವೆಂಬ ಮಾಹಿತಿ ಇದ್ದರೂ ರಸ್ತೆಯನ್ನು ಸರಿಪಡಿಸಿಲ್ಲ. ಕೇಳಿದರೆ ಮಾಡುತ್ತೆವೆ ಎಂಬ ಸಬೂಬು ಹೇಳುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆ ಹಾಳಾಗಿದ್ದು, ಇಂದು ಬೆಳಗ್ಗೆ ಗೊಟ್ಟಿಗೇನಹಳ್ಳಿಯಿಂದ ಕಂದಿಕೆರೆಗೆ ಬರುವಾಗ ರಸ್ತೆಯಲ್ಲಿನ ಗುಂಡಿಯಲ್ಲಿ ಬಿದ್ದೆ.

ಇದನ್ನಾದರೂ ಅಧಿಕಾರಿಗಳು ನೋಡಿ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಲಿ. ನಮ್ಮ ಭಾಗದ ರಸ್ತೆಯನ್ನು ಸರಿಪಡಿಸಲಿ ಎಂದು ಆಗ್ರಹಿಸಿದರು. ಕಂದಿಕೆರೆಯಿಂದ ಗೊಟ್ಟಿಗೆನಹಳ್ಳಿ ಭಾಗದಲ್ಲಿ ಕಸವೇಹಟ್ಟಿ ಹಾಗೂ ತೋಟದ ಮನೆಗಳು ಸೇರಿ ಸುಮಾರು 100ರಿಂದ 150ಮನೆಗಳಿದ್ದು, ಪಡಿತರ ಪಡೆಯಲು, ನಾಡಕಚೇರಿ, ಆಸ್ಪತ್ರೆ ಅಲ್ಲದೆ ಎಲ್ಲ ಕೆಲಸ ಕಾರ್ಯಗಳಿಗೆ ಇದೇ ಮಾರ್ಗದಲ್ಲಿ ಓಡಾಡಬೇಕು. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಗೊಂಡು ರಸ್ತೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ಗ್ರಾಮಸ್ಥರಾದ ಶ್ರೀಧರ್​, ಮೂರ್ತಣ್ಣ, ಶಿವಣ್ಣ, ಮಲ್ಲಿಕಯ್ಯ, ಜಯಣ್ಣ, ಮಂಜುನಾಥ್​ ಇದ್ದರು..