ಸಕಲೇಶಪುರ: ಕೆಲಸದಲ್ಲಿ ನೈಪುಣ್ಯತೆ ಸಾಧಿಸಿದರೆ, ಜೀವನ ಸುಗಮವಾಗಿ ಸಾಗಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸೋಮವಾರ ತಾ.ಪಂ. ಅವರಣದಲ್ಲಿ ಗ್ರಾಮೀಣ ಕೈಗಾರಿಕಾ ವಿಭಾಗದ ವತಿಯಿಂದ ಸುಧಾರಿತ ಉಪಕರಣಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಉದ್ಯಮ ಸ್ಥಾಪನೆಯ ಉದ್ದೇಶದಿಂದ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವ ಜನರಿಗೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ತಾವು ಮಾಡುವ ಕೆಲಸದಲ್ಲಿ ನೈಪುಣ್ಯ ಸಾಧಿಸಿದಲ್ಲಿ ಆರ್ಥಿಕವಾಗಿ ಸದೃಢರಾಗಬಹುದು. ಇಂದು ಎಲ್ಲ ರಂಗಗಳಲ್ಲೂ ನೈಪುಣ್ಯತೆ ಹೊಂದಿರುವ ಕೆಲಸಗಾರರ ಕೊರತೆ ಇದೆ. ನಿಪುಣ ಕೆಲಸಗಾರರು ಹೆಚ್ಚು ಕೆಲಸ ಮಾಡಲು ಮುಂದಾಗುತ್ತಿಲ್ಲ. ಆದ್ದರಿಂದ ತಾವು ಮಾಡುವ ಕೆಲಸವನ್ನು ಹೆಚ್ಚಿನ ಗುಣಮಟ್ಟದಿಂದ ಹಾಗೂ ಹೆಚ್ಚು ವೇಳೆ ಕೆಲಸ ಮಾಡುವ ಮೂಲಕ ಹತ್ತಾರು ಜನರಿಗೆ ಕೆಲಸ ನೀಡುವಂತಾಗಬೇಕು ಆಗ ಮಾತ್ರ ಸರ್ಕಾರದ ಗುರಿ ಈಡೇರಲಿದೆ ಎಂದರು.
ಗ್ರಾಮೀಣ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ರವಿಪ್ರಸಾದ್ ಮಾತನಾಡಿ, ಗುಡಿ ಕೈಗಾರಿಕೆಗಳ ಮೂಲಕ ಮಹಿಳೆಯರು ಹಾಗೂ ಪುರುಷರು ಸ್ವಾವಲಂಬನೆ ಸಾಧನೆಗಾಗಿ ನೀಡಲಾಗುತ್ತಿರುವ ಎಲ್ಲ ಪರಿಕರಗಳು, ಗ್ಯಾರಂಟಿ ಹಾಗೂ ವಾರಂಟಿ ಹೊಂದಿದ್ದು, ಉಚಿತವಾಗಿ ದುರಸ್ತಿ ಮಾಡಿಕೊಡಲಾಗುವುದು. ಆದ್ದರಿಂದ ಫಲಾನುಭವಿಗಳು ತಮ್ಮ ಯಂತ್ರೋಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಆಲೂರು ಹಾಗೂ ಸಕಲೇಶಪುರ ತಾಲೂಕಿನ ನೂರಕ್ಕೂ ಅಧಿಕ ಫಲಾನುಭವಿಗಳಿಗೆ ಟೈಲರಿಂಗ್ ಮಿಷಿನ್ ಸೇರಿದಂತೆ ವಿವಿಧ ಪರಿಕರಗಳನ್ನು ವಿತರಿಸಲಾಯಿತು.
ಈ ವೇಳೆ ತಾ.ಪಂ ಇಒ ಗಂಗಾಧರ್, ಕೈಗಾರಿಕಾ ವಿಸ್ತರಣಾಧಿಕಾರಿ ಆನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.