ಮೂಡಿಗೆರೆಯಲ್ಲಿ ಗ್ರಾಪಂ ಜನಪ್ರತಿನಿಧಿಗಳು ಮತ್ತು ಪಿಡಿಒಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು. ಕೀರ್ತನಾ, ಕೃಷ್ಣ ನಾಯಕ್, ನಯನಾ, ಚೇತನ್, ದಯಾವತಿ ಇತರರಿದ್ದರು. 
ಜಿಲ್ಲೆ

ಕೆಲಸದಲ್ಲಿ ನಿರಾಸಕ್ತಿ ತೋರಿದರೆ ಪರಿಣಾಮ ಎದುರಿಸಲು ಸಿದ್ಧರಾಗಿ

ಮೂಡಿಗೆರೆ: ಅಧಿಕಾರಿಗಳು ಜನರ ಕೆಲಸ ಮಾಡಿಕೊಡಲು ಸತಾಯಿಸಬಾರದು. ನಿಮ್ಮ ಚಿತಾವಣೆಯಿಂದಾಗಿ ಜನ ಅಹವಾಲು ಹಿಡಿದು ಜನಪ್ರತಿನಿಧಿಗಳ ಬಳಿ ಸಾಲುಗಟ್ಟಿ ಬರುತ್ತಾರೆ. ಇಚ್ಛಾಶಕ್ತಿ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸದಲ್ಲಿ ಹಿಂದೇಟು ಹಾಕಿದರೆ ಪರಿಣಾಮ ನೆಟ್ಟಗಿರದು ಎಂದು ಶಾಸಕಿ ನಯನಾ ಮೋಟಮ್ಮ ಪಿಡಿಒಗಳಿಗೆ ಎಚ್ಚರಿಕೆ ನೀಡಿದರು.

ತಾಪಂನಲ್ಲಿ ಬುಧವಾರ ಮೂಡಿಗೆರೆ ಮತ್ತು ಕಳಸ ತಾಲೂಕಿನ ಗ್ರಾಪಂ ಜನಪ್ರತಿನಿಧಿಗಳು ಹಾಗೂ ಪಿಡಿಒಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮೂಡಿಗೆರೆ ತಾಲೂಕು ಆರ್ಥಿಕವಾಗಿ ಮುಂದಿದೆ. ಆದರೆ ಅಭಿವೃದ್ಧಿಯಲ್ಲಿ ತೀರ ಹಿಂದುಳಿದಿದೆ. ಜಿಲ್ಲೆಯ ಇತರ ತಾಲೂಕಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಉಂಟಾದ ಕೊರತೆ ಎದ್ದು ಕಾಣುತ್ತದೆ. ಈ ರೀತಿ ಹಿಂದುಳಿಯಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ಸಮನ್ವಯದ ಕೊರತೆಯಿದೆ. ಕೆಲ ಗ್ರಾಪಂಗಳಲ್ಲಿ ಜನಪ್ರತಿನಿಧಿಗಳ ಪಕ್ಷಪಾತದ ಧೋರಣೆಯಿಂದಾಗಿ ಜನರ ಕೆಲಸ ಕುಂಠಿತವಾಗುತ್ತಿದೆ ಎಂದು ಹೇಳಿದರು.

ನಾನು ಶಾಸಕಿಯಾದ ಒಂದೂವರೆ ವರ್ಷದಲ್ಲಿ ಪಕ್ಷಪಾತ ಮಾಡಿಲ್ಲ. ಎಲ್ಲ ಪಕ್ಷದವರನ್ನೂ ಒಂದೇ ರೀತಿ ನೋಡಿದ್ದೇನೆ. ರಾಜಕೀಯ ಕ್ಷೇತ್ರಕ್ಕೆ ಬಂದು 8 ವರ್ಷ ಕಳೆದಿದೆ. ನನಗೆ ಅನುಭವದ ಕೊರತೆಯಿದೆ. ಗ್ರಾಪಂಗೆ ನಾಲ್ಕೈದು ಬಾರಿ ಆಯ್ಕೆಯಾದ ಸದಸ್ಯರಿದ್ದಾರೆ. ಅವರಿಗೆ ಪೂರ್ಣ ಪ್ರಮಾಣದ ಅನುಭವವಿದ್ದರೂ ಪಕ್ಷಪಾತ ಧೋರಣೆ ಹಾಗೂ ಅಧಿಕಾರಿಗಳೊಂದಿಗಿನ ಸಮನ್ವಯ ಕೊರತೆಯಿಂದಾಗಿ ಅಭಿವೃದ್ಧಿಯಲ್ಲಿ ತಾಲೂಕು ಹಿಂದೆ ಬೀಳುವಂತಾಗಿದೆ. ತಳಮಟ್ಟದಿಂದ ಅಭಿವೃದ್ಧಿಗೆ ಅಡಿಗಲ್ಲು ಹಾಕಿದಾಗ ಮಾತ್ರ ತಾಲೂಕು ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.

ರಸ್ತೆ, ಕುಡಿಯುವ ನೀರು, ಬಾಕ್ಸ್ ಚರಂಡಿ ಮಾಡಿಸಿಕೊಡುವಂತೆ ಜನ ನನ್ನ ಹಾಗೂ ಜಿಲ್ಲಾಧಿಕಾರಿ ಬಳಿ ಹೋಗುತ್ತಾರೆ. ಇದನ್ನು ತಪ್ಪಿಸಬೇಕಾದರೆ ಕ್ಷೇತ್ರ ಅಭಿವೃದ್ಧಿಯಾಗಬೇಕು. ನನಗೆ ಬರುವ ವಾರ್ಷಿಕ ಎರಡು ಕೋಟಿ ರೂಪಾಯಿ ಅನುದಾನದಲ್ಲಿ ಎಲ್ಲ ಕಡೆ ಅಭಿವೃದ್ಧಿ ನಡೆಸಲು ಸಾಧ್ಯವಿಲ್ಲ. ನನ್ನ ಕ್ಷೇತ್ರದ ಸರ್ಕಾರಿ ಶಾಲೆಗಳ ಶೌಚಗೃಹ ನಿರ್ಮಾಣಕ್ಕೆ ಶಾಸಕರ ನಿಧಿಯ ಎಲ್ಲ ಅನುದಾನ ಬಳಸಿದ್ದೇನೆ. ಗ್ರಾಪಂಗೆ ಬರುವ ಅನುದಾನದಲ್ಲಿ ಕ್ರಿಯಾಯೋಜನೆ ತಯಾರಿಸಿ ಅಭಿವೃದ್ಧಿಗೆ ಮುಂದಾದಲ್ಲಿ ಬಹುತೇಕ ಸಮಸ್ಯೆಗಳಿಗೆ ಮುಕ್ತಿ ದೊರಕಿ ದೊರಕಿಸಬಹುದು. ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಅಧಿಕಾರಿಗಳು ಗೌರವ ನೀಡುವುದನ್ನು ಕಲಿಯಬೇಕು. ಬೇಕಾಬಿಟ್ಟಿಯಾಗಿ ಅಧಿಕಾರಿಗಳು ವರ್ತಿಸುತ್ತಾರೆ ಎಂಬ ಆರೋಪವಿದೆ. ಕೆಲ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಜನಪ್ರತಿನಿಧಿಗಳು, ಅಂತಹ ಅಧಿಕಾರಿಯನ್ನು ವರ್ಗಾವಣೆಗೊಳಿಸುವಂತೆ ಹೇಳಿಕೊಂಡು ನನ್ನ ಬಳಿ ಬರುತ್ತಾರೆ. ದೂರು ಬಂದ ಅಧಿಕಾರಿಗಳನ್ನು ಕೂಡ ನಾನು ಉಳಿಸಿಕೊಂಡಿದ್ದೇನೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆ ಹೇಳಿಕೊಂಡು ಬರುವ ಜನರಿಗೆ ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಗೌರವ ನೀಡುವುದನ್ನು ಅಧಿಕಾರಿಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಜಿಪಂ ಉಪ ಕಾರ್ಯದರ್ಶಿ ಕೃಷ್ಣ ನಾಯಕ್, ಜಿಪಂ ನಿರ್ದೇಶಕಿ ನಯನಾ, ಸಹಾಯಕ ನಿರ್ದೇಶಕ ಚೇತನ್, ತಾಪಂ ಇಒ ದಯಾವತಿ, ತರಬೇತುದಾರರಾದ ಚಾಲುಕ್ಯ ಭಾರವಿ, ರಾಜೇಂದ್ರ, ತಾಪಂ ಸಹಾಯಕ ನಿರ್ದೇಶಕ ನವೀನ್, ಕುಂದೂರು ಪಿಡಿಒ ವಾಸುದೇವ್ ಇತರರಿದ್ದರು.