ಚಿತ್ರದುರ್ಗ: ಕೆಲಸದ ಒತ್ತಡದಲ್ಲಿ ಆರೋಗ್ಯ ಮರೆಯಬಾರದು ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಪತ್ರಕರ್ತರಿಗೆ ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಇಂಡಿಯಾನ-ಎಸ್‌ಜೆಎಂ ಹಾರ್ಟ್ ಸೆಂಟರ್ ಆಶ್ರಯದಲ್ಲಿ ನಗರದ ಪತ್ರಿಕಾಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಹೃದ್ರೋಗ ತಪಾಸಣೆ ಕಾರ್ಡ್ ವಿತರಿಸಿ ಮಾತನಾಡಿದರು.
ಹಗಲು ರಾತ್ರಿಯನ್ನದೇ ಬದ್ಧತೆಯಿಂದ ಕೆಲಸ ಮಾಡುವಂಥ ಪತ್ರಕರ್ತರು ತಮ್ಮ ಆರೋಗ್ಯದೆಡೆ ನಿಗಾ ವಹಿಸುವುದಿಲ್ಲ. ಹಾರ್ಟ್ ಸೆಂಟರ್ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಹೃದ್ರೋಗ ತಪಾಸಣೆಗೆ ಒಪಿಡಿ ಉಚಿತ ಸೇವೆ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಯೋಜನೆ ಜಾರಿಗೊಳಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹೊಸದಿಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿ ಕಾರ್ಜುನಯ್ಯ ಮಾತನಾಡಿ, ಈಚೆಗೆ 40-45 ವರ್ಷದವರು ಹೃದಯಾಘಾತಕ್ಕೆ ತುತ್ತಾಗುತ್ತಿರುವುದು ದುರ್ದೈವದ ಸಂಗತಿ. ಪತ್ರಕರ್ತರು ಹಾಗೂ ಪತ್ರಿಕಾ ವಿತರಕರು ತಮ್ಮ ಆರೋಗ್ಯದೆಡೆ ಗಮನ ಹರಿಸಬೇಕು. ಪತ್ರಕರ್ತರಂತೆ ಪತ್ರಿಕಾ ವಿತರಕರ ಪಾತ್ರವೂ ಅತ್ಯಂತ ಹಿರಿದಾಗಿದೆ. ಉತ್ತಮ ಜೀವನಶೈಲಿ ಮೂಲಕ ಪತ್ರಕರ್ತರು, ಪತ್ರಿಕಾವಿತರಕರು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಮೊಬೈಲ್‌ನಿಂದಾಗಿ ಪತ್ರಿಕಾ ಓದುಗರ ಸಂಖ್ಯೆ ಕುಸಿಯುತ್ತಿದೆ. ಓದುಗರೊಂದಿಗೆ ಪತ್ರಿಕೋದ್ಯಮವನ್ನೂ ಉಳಿಸಿಕೊಳ್ಳುವ ಜವಾಬ್ದಾರಿ ವರದಿಗಾರರ ಮೇಲಿದೆ. ಪತ್ರಕರ್ತರ ಜತೆಗೆ ಹಗಲಿರಲು ದುಡಿಯುವ ಪತ್ರಿಕಾ ವಿತರಕರಿಗೂ ಕಾರ್ಡ್‌ಗಳನ್ನು ವಿತರಿಸಬೇಕೆಂದರು.
ಹಾರ್ಟ್‌ಸೆಂಟರ್ ಕಾರ್ಯನಿರ್ವಾಹಕ ಅಧಿಕಾರಿ ರೂಪೇಶ್‌ಕುಮಾರ್ ಶೆಟ್ಟಿ ಮಾತನಾಡಿ, ಕಾರ್ಡ್‌ದಾರರಿಗೆ ಒಪಿಡಿ ಸಂಪೂರ್ಣ ಉಚಿತವಾಗಿದೆ. ಒಳರೋಗಿಯಾಗಿ ಚಿಕಿತ್ಸೆ ಪಡೆದರೆ ಶೇ.20 ರಿಯಾಯಿತಿ ದೊರೆಯಲಿದೆ. ಪತ್ರಿಕಾ ವಿತರಿಕರಿಗೂ ಕಾರ್ಡ್ ವಿತರಿಸುವುದಾಗಿ ಪ್ರಕಟಿಸಿದರು.
ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ತುಕಾರಾಂರಾವ್ ಮಾತನಾಡಿ, ಪತ್ರಿಕೆಗಳ ನರನಾಡಿಗಳಾಗಿರುವ ಪತ್ರಿಕಾ ವಿತರಕರಿಗೂ ಕಾರ್ಡ್ ಸೌಲಭ್ಯ ಘೋಷಿಸಿದ್ದು ಉತ್ತಮ ಬೆಳವಣಿಗೆ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ ಮಾತನಾಡಿ, ಪತ್ರಕರ್ತರಿಗೆ ಅಪಘಾತ ವಿಮೆ ಮಾಡಿಸಲು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಗತ್ಯ ಸಿದ್ಧತೆ ನಡೆಸಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಸಂಘದ ಜಿಲ್ಲಾ ಉಪಾಧ್ಯಕ್ಷ ಸಿ.ಪಿ. ಮಾರುತಿ, ಕಾರ್ಯದರ್ಶಿ ವಿರೇಶ್ ವಿ. ಅಪ್ಪು, ಖಜಾಂಚಿ ಡಿ. ಕುಮಾರಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗೇಶ್, ಎಚ್. ತಿಪ್ಪೇಸ್ವಾಮಿ, ಪರಶುರಾಂಪುರ ಮಂಜುನಾಥ್, ರವಿ ಉಗ್ರಾಣ, ಸಿ. ರಾಜಶೇಖರ್, ನವೀನ್‌ಕುಮಾರ್, ಹರಿಯಬ್ಬೆ ಸಿ. ಹೆಂಜಾರಪ್ಪ, ಶ. ಮಂಜುನಾಥ್ ಇತರರು ಇದ್ದರು.
ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಸೂಕ್ತ
ಕಾಲ, ಕಾಲಕ್ಕೆ ಆರೋಗ್ಯ ತಪಾಸಣೆ, ಉತ್ತಮ ಜೀವನ ಶೈಲಿ, ಅಗತ್ಯ ಮುಂಜಾಗ್ರತಾ ಕ್ರಮಗಳ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕಿದೆ.
ರಂಜಿತ್‌ಕುಮಾರ್ ಬಂಡಾರು, ಎಸ್‌ಪಿ, ಚಿತ್ರದುರ್ಗ.
---