ಮೈಸೂರು: ಕೆಲಸದ ಅವಧಿ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಕಾರ್ಯಕರ್ತರು ಕುವೆಂಪುನಗರದ ಕಾರ್ಮಿಕ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.
ರಾಜ್ಯ ಸರ್ಕಾರ ಕಾರ್ಪೊರೇಟ್ ಬಂಡವಾಳಶಾಹಿ ಪರವಾಗಿ ನಿಯಮಗಳನ್ನು ಬದಲಾಯಿಸುತ್ತಿರುವುದು ಅಪಾಯಕಾರಿ. ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಲು ಮುಂದಾಗಿರುವುದು ಕಾರ್ಮಿಕ ವಿರೋಧಿ ನಡೆಯಾಗಿದೆ. ಇದರಿಂದ ಕಾರ್ಮಿಕರ ಮೇಲಿನ ಒತ್ತಡ ಹೆಚ್ಚುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪಾಯಕಾರಿ ಕೆಲಸಗಳಲ್ಲಿ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅನುಕೂಲವಾಗುವ ರೀತಿಯ ಬದಲಾವಣೆ ತರಲು ಸರ್ಕಾರ ನಿರ್ಧರಿಸಿರುವುದು ಆತಂಕಕಾರಿ ಬೆಳವಣಿಗೆ. ಇದು ಖಂಡನೀಯ. ಕಾರ್ಮಿಕರ ಪರವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಪೊರೇಟ್ ವ್ಯವಸ್ಥೆಯಲ್ಲಿ ಕಾರ್ಮಿಕರನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಈ ವ್ಯವಸ್ಥೆ ಬಂದರೆ, ಕಾರ್ಮಿಕರು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಸರ್ಕಾರವು ತನ್ನ ನಿರ್ಧಾರದ ಬಗ್ಗೆ ಮರು ಪರಿಶೀಲನೆ ಮಾಡಬೇಕು.
ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು. ಬೇಡಿಕೆ ಈಡೇರದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇದೇ ವೇಳೆ ಕಾರ್ಮಿಕ ಅಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಮುಖಂಡರಾದ ಎನ್.ಕೆ.ಬಾಲಾಜಿರಾವ್, ಜಿ.ಜಯರಾಮ್, ಮಹದೇವ, ರಾಘವೇಂದ್ರ, ಸುಬ್ರಹ್ಮಣ್ಯ ಇದ್ದರು.