ಜಿಲ್ಲೆ

ಕೆಲಸಗಳಿಗೆ ಮಕ್ಕಳ ಬಳಕೆ ಅಪರಾಧ

ಮೈಸೂರು: ಬಾಲಕಾರ್ಮಿಕ ಪದ್ಧತಿ ವಿರುದ್ಧ ಸಂಘಟಿತ ಹೋರಾಟ ಮಾಡಬೇಕಿದ್ದು, ಇಲ್ಲವಾದರೆ ಮಕ್ಕಳು ಶೋಷಣೆಗೆ ಬಲಿಯಾಗುತ್ತಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ಹೇಳಿದರು.

ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯಲ್ಲಿ ಕಲಿತು ವಿದ್ಯಾವಂತರಾಗಬೇಕಾದ ಮಕ್ಕಳನ್ನು ಕೆಲಸಕ್ಕೆ ಸೇರಿಸಿ, ಮಕ್ಕಳ ಭವಿಷ್ಯ ಹಾಳು ಮಾಡುವುದನ್ನು ತಡೆಗಟ್ಟಬೇಕಿದೆ. ಈ ಹಿನ್ನೆಲೆಯಲ್ಲಿ ಪಾಲಕರಿಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದರು.

14 ವರ್ಷದೊಳಗಿನ ಮಕ್ಕಳನ್ನು ಮನೆ ಕೆಲಸ, ಕೃಷಿ, ಹೋಟೆಲ್, ಕಾರ್ಖಾನೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಬಳಸಿಕೊಳ್ಳುವುದು ಅಪರಾಧ. ಅಂತಹ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ 1983ರಲ್ಲಿ ಬಾಲ ಕಾರ್ಮಿಕ ತಡೆ ಕುರಿತು ಕಾಯ್ದೆ ಜಾರಿಗೆ ತರಲಾಗಿದೆ ಎಂದರು.

ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕೆಂಬ ಉದ್ದೇಶದಿಂದ ಕಳೆದ 21 ವರ್ಷದಿಂದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಆದರೆ, ಎಷ್ಟು ಮಕ್ಕಳನ್ನು ಕೆಲಸದಿಂದ ಬಿಡಿಸಿದ್ದೇವೆ ಎನ್ನುವುದು ಮುಖ್ಯ. ಕೋವಿಡ್ ಸಮಯದಲ್ಲಿ ಎಲ್ಲ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದವು. ಈ ಸಂದರ್ಭದಲ್ಲಿ ಪಾಲಕರನ್ನು ಕಳೆದುಕೊಂಡು ಮಕ್ಕಳು ಅನಾಥರಾದರು. ಈ ಮಕ್ಕಳು ಬಾಲ ಕಾರ್ಮಿಕರ ಆಗುವ ಆತಂಕ ಇತ್ತು ಎಂದರು.


ಕೆಲವೆಡೆ ಇನ್ನೂ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿದೆ. ಇದರ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ. ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು..


ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಹೋಟೆಲ್ ಉದ್ಯಮ ಹಾಗೂ ರಸ್ತೆ ಬದಿಯಲ್ಲಿ ಇಂದಿಗೂ ಬಾಲ ಕಾರ್ಮಿಕರು ಕೆಲಸ ಮಾಡುವ ಕುರಿತು ದೂರು ಕೇಳಿ ಬರುತ್ತಿವೆ. ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.


ಹದಿಹರೆಯ ವಯಸ್ಸಿನ ಮಕ್ಕಳಿಗೆ ಶಿಕ್ಷಣ ನೀಡುವ ಅವಶ್ಯಕತೆ ಇದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಪಾಲಕರು ಪ್ರೋತ್ಸಾಹಿಸಬೇಕು. ದೇಶ ಸುಭದ್ರವಾಗಬೇಕಾದರೆ ಮಕ್ಕಳ ಕನಸನ್ನು ಸಾಕಾರಗೊಳಿಸುವಂತಹ ವಾತಾವರಣ ಸೃಷ್ಟಿಸಬೇಕು. ಮಕ್ಕಳಲ್ಲಿ ಸುರಕ್ಷತೆ ಭಾವನೆ ಮೂಡಿಸಬೇಕು. ಆರ್ಥಿಕವಾಗಿ ಸಬಲರು ಬಡ ಮಕ್ಕಳ ಹಾಗೂ ಬಾಲಕಾರ್ಮಿಕ ಪದ್ಧತಿಯಲ್ಲಿ ಸಿಲುಕಿರುವ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು. ಮೈಸೂರನ್ನು ಬಾಲ ಕಾರ್ಮಿಕ ಮುಕ್ತ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.


ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಬಡತನ, ಹಸಿವಿನಿಂದಾಗಿ ಸಮಾಜದಲ್ಲಿ ಬಾಲ ಕಾರ್ಮಿಕ ಆಚರಣೆ ಈಗಲೂ ಚಾಲ್ತಿಯಲ್ಲಿ ಇದೆ. ಪಾಲಕರ ಬೇಜವಾಬ್ದಾರಿಯಿಂದಲೇ ಬಾಲ ಕಾರ್ಮಿಕ ಪದ್ಧತಿ ಇನ್ನೂ ಹೆಚ್ಚುತ್ತಿದೆ. ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಹಣ ಸಂಪಾದನೆಗಾಗಿ ಪಾಲಕರು ಮಕ್ಕಳನ್ನು ಕೆಲಸಕ್ಕೆ ಕಳುಹಿಸಬಾರದು ಎಂದು ಬೇಸರ ವ್ಯಕ್ತಪಡಿಸಿದರು.


ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಓವೆಲ್ ಮೈದಾನದಿಂದ ಕಲಾಮಂದಿರದವರೆಗೆ ವಿವಿಧ ಶಾಲೆಗಳ ನೂರಾರು ಮಕ್ಕಳಿಂದ ಜಾಗೃತಿ ಜಾಥಾ ನಡೆಯಿತು. ಬಾಲಕಾರ್ಮಿಕ ಪದ್ಧತಿ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ಫಲಕ ಪ್ರದರ್ಶಿಸಿ ಮಕ್ಕಳು ಗಮನ ಸೆಳೆದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್, ಜಿಪಂ ಸಿಇಒ ಡಾ.ಕೆ.ಎಂ.ಗಾಯತ್ರಿ, ಸಿಸಿಬಿ ಎಸಿಪಿ ಸಂದೇಶ್ ಕುಮಾರ್, ಸಹಾಯಕ ಕಾರ್ಮಿಕ ಆಯುಕ್ತೆ ನಾಜೀಯಾ ಸುಲ್ತಾನ್, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್‌ಗೌಡ, ಮಹಿಳಾ ಒಕ್ಕೂಟದ ಹೇಮಲತಾ, ಆರ್‌ಎಲ್‌ಎಚ್‌ಪಿ ಸರಸ್ವತಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.