ಕಲಬುರಗಿ: ವರ್ಷದಿಂದ ಟೆಂಡರ್ ಆಗಿರುವ ರಸ್ತೆ ಕಾಮಗಾರಿ ಶುರು ಮಾಡಿಲ್ಲ. ಇಲ್ಲದ ನೆಪಗಳನ್ನು ಹೇಳ್ತಾ ಇದ್ದೀರಿ. ನಿಮ್ಮಂಥ ಅಧಿಕಾರಿಗಳು ಕೆಲಸದಲ್ಲಿ ಇರಬೇಕಾ? ಎಲ್ಲ ಬೋಗಸ್ ಮಾಡ್ತಾ ಇದ್ದೀರಿ. ನಿಷ್ಠೆಯಿಂದ ಕೆಲಸ ಮಾಡದಿದ್ದರೆ ನಮ್ಮ ಕ್ಷೇತ್ರದಲ್ಲಿ ನಿಮ್ಮ ಅಗತ್ಯವಿಲ್ಲ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಎಚ್ಚರಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ದಕ್ಷಿಣ ವಿಧಾನಸಭೆ ಮತಕ್ಷೇತ್ರದ ತಾಲೂಕು ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಲೋಕೋಪಯೋಗಿ ಇಲಾಖೆ ಅಧಿಕಾರಿ ಕೆಲಸ ಆರಂಭಕ್ಕೆ ಕುಂಟು ನೆಪಗಳನ್ನು ಹೇಳುತ್ತಿದ್ದಂತೆ ಗರಂ ಆದರು. ವರ್ಷಾನುಗಟ್ಟಲೆ ಹೀಗೆ ಹೇಳಿದ್ರೆ ಹೇಗೆ? ಶೀಘ್ರ ಕೆಲಸ ಆರಂಭಿಸಿ ಎಂದು ತಾಕೀತು ಮಾಡಿದರು.
ಮತಕ್ಷೇತ್ರದ ಗ್ರಾಮಗಳಲ್ಲಿ ಬೆಳೆ ವಿಮೆ ಕಡಿಮೆ ಆಗಿದೆ. ಇದಕ್ಕೆ ಕೃಷಿ ಅಧಿಕಾರಿಗಳ ಜಾಗೃತಿ ಕೊರತೆಯೇ ಕಾರಣ. ಸುಮ್ಮನೆ ಆಫೀಸ್‌ನಲ್ಲಿ ಕುಳಿತುಕೊಳ್ಳುವುದಲ್ಲ, ವಾರದೊಳಗೆ ಪ್ರಚಾರ ವಾಹನ ಆರಂಭಿಸಿ ರೈತರಲ್ಲಿ ಜಾಗೃತಿ ಮೂಡಿಸಿ. ನಾನೇ ಚಾಲನೆ ನೀಡುತ್ತೇನೆ ಎಂದು ಹೇಳಿದರು.
ತಾಪಂ ಆಡಳಿತಾಧಿಕಾರಿ ಗಂಗಾಧರ ಎಂ., ಇಒ ಸೈಯದ್ ಪಟೇಲ್, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ ಇತರರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು ಮತ್ತು ನೈರ್ಮಲ್ಯ, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಕೈಗಾರಿಕೆ, ತೋಟಗಾರಿಕೆ ಸೇರಿ ವಿವಿಧ ಇಲಾಖೆ ಪ್ರಗತಿಯನ್ನು ಶಾಸಕರು ಪರಿಶೀಲಿಸಿದರು.