ಚಿಕ್ಕನಾಯಕನಹಳ್ಳಿ: ಗ್ರಾಮಲೆಕ್ಕಾಧಿಕಾರಿ, ಕಂದಾಯಾಧಿಕಾರಿಗಳು ಜವಾಬ್ದಾರಿಯಿಂದ ಪೌತಿ ಖಾತೆ ಮಾಡಬೇಕು. ಕೃಷಿ ಜಮೀನಿನ ಮಾಲೀಕ ಮರಣ ಹೊಂದಿದರೆ ಅದರ ಮಾಹಿತಿ ಪಡೆದು ಸರಿಯಾದ ದಾಖಲೆ ಮಾಡಿಕೊಂಡು ಅಧಿಕಾರಿಗಳೇ ಮೃತರ ವಾರಸುದಾರರಿಗೆ ಪೌತಿ ಖಾತೆ ಮಾಡಿಕೊಡಬೇಕು. ಪೌತಿಖಾತೆಗಾಗಿ ರೈತರು ಅಲೆದಾಡಿದರೆ ನಿಮ್ಮನ್ನು ಮನೆಗೆ ಕಳುಹಿಸುತ್ತೇನೆ ಎಂದು ಸಚಿವ ಮಾಧುಸ್ವಾಮಿ ಎಚ್ಚರಿಸಿದರು.
ಕಂದಿಕೆರೆ ಹೋಬಳಿಯ ಸಾದರಹಳ್ಳಿಯಲ್ಲಿ ಕಂದಾಯ ಇಲಾಖೆ ಶನಿವಾರ ಆಯೋಜಿಸಿದ್ದ ಕಂದಾಯ ದಾಖಲೆ ಮನೆಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತ ಜಮೀನುಗಳಿಗೆ ಸಂಬಂಧಿಸಿದಂತೆ ಅನೇಕ ಜಿಜ್ಞಾಸೆಗಳು ಕಾಡುತ್ತಿದ್ದವು. ಅದನ್ನು ಸರಳೀಕರಣ ಮಾಡುವುದು ಮುಖ್ಯವಾಗಿತ್ತು. 79/ಎ ಹಾಗೂ 79/ಎಬಿ ಕಾಯ್ದೆಗಳು ಸಮಸ್ಯೆಯಾಗಿದ್ದವು. ಇವುಗಳನ್ನು 79/ಎಬಿಗೆ ಅಂತಿಮವಾದ ಜೋಗುಳ ಹಾಡಿ ಕಾನೂನು ಪುಸ್ತಕದಿಂದ ತೆಗೆಯುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸುತ್ತಿದ್ದೇವೆ ಎಂದರು.
ಕೈಬರಹದ ದಾಖಲೆಗಳನ್ನು ಗಣಕೀಕೃತಗೊಳಿಸುವ ಸಂದರ್ಭದಲ್ಲಿ ಅನೇಕ ತಪ್ಪುಗಳಾಗಿವೆ. ಅವುಗಳಲ್ಲಿ ಪಹಣಿಯಲ್ಲಿನ 3 ಹಾಗೂ 9ನೇ ಕಾಲಂ ನಲ್ಲಿರುವಂತಹ ಅಂಕಿಅಂಶಗಳು ಸರಿಪಡಿಸುವಲ್ಲಿ ಅನೇಕ ವರ್ಷಗಳೇ ಆಗಿದ್ದವು. ಅದರಲ್ಲಿ ಹೊಂದಾಣಿಕೆಯಾಗದೆ ಇರುವ ಸಮಸ್ಯೆಗಳೇ ಹೆಚ್ಚಾಗಿದ್ದು, ಕಂದಾಯ ಇಲಾಖೆಯ ಉಪವಿಭಾಗದಲ್ಲಿ ತುಮಕೂರಿನಲ್ಲಿ 6670 ಪ್ರಕರಣ, ತಿಪಟೂರಿನಲ್ಲಿ 3ಸಾವಿರ ಪ್ರಕರಣ ಸೇರಿ ಒಟ್ಟು ಜಿಲ್ಲೆಯಲ್ಲಿ 15 ರಿಂದ 20ಸಾವಿರ ಪ್ರಕರಣಗಳು ಇದರಡಿಯಲ್ಲಿ ದಾಖಲಾಗಿದ್ದವು. ಹೀಗಾಗಿ ಪ್ರತಿ ತಿಂಗಳು 100 ಪ್ರಕರಣ ಬಗೆಹರಿಸುವಂತೆ ಸರ್ಕಾರ ಅದೇಶಮಾಡಿ ವಿಲೇವಾರಿ ಮಾಡುವ ಕೆಲಸ ಮಾಡುತ್ತಿದೆ ಎಂದರು.
ಗ್ರಾಮ ಒನ್ ಸೇವಾಕೇಂದ್ರ ಆರಂಭ: ಮುಂದಿನ ದಿನಗಳಲ್ಲಿ ಸರ್ಕಾರ ಗ್ರಾಮ ಒನ್ ಸೇವಾಕೇಂದ್ರಗಳನ್ನು ಆರಂಭಿಸಲಿದೆ, ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕನಿಷ್ಠ ಎರಡು ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಜನರ ಅಲೆದಾಟ ತಪ್ಪಿಸಿ ಅಲ್ಲೇ ದಾಖಲೆಗಳನ್ನು ಪಡೆದುಕೊಳ್ಳುವಂತೆ ಮಾಡಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಪಿಂಚಣಿ ಯೋಜನೆಯಲ್ಲಿ ಅನ್ಯಾಯವಾಗುವುದನ್ನು ತಪ್ಪಿಸಲು ಹಾಗೂ ಅರ್ಹರಿಗೆ ಪಿಂಚಣಿ ತಲುಪಿಸುವ ಉದ್ದೇಶದಿಂದ ನವೋದಯ ಆ್ಯಪ್ ಸಿದ್ಧಪಡಿಸಲಾಗಿದೆ. ಬೆಳೆಗಳನ್ನು ಪಹಣಿಯಲ್ಲಿ ನಮೂದಿಸಲು ಹಾಗೂ ತಮ್ಮ ಜಮೀನಿನ ವಿವರಗಳನ್ನು ನೋಡಲು ಸ.ನಂಬರ್ ತಿಳಿದುಕೊಳ್ಳಲು ದಿಷಾಂಕ್ ಆ್ಯಪ್ ಮಾಡಲಾಗಿದ್ದು, ರೈತರು ಉಪಯೋಗ ಮಾಡಿಕೊಳ್ಳಬೇಕು ಎಂದರು.
ತಾಪಂ ಮಾಜಿ ಸದಸ್ಯರಾದ ಕೇಶವಮೂರ್ತಿ, ನಿರಂಜನಮೂರ್ತಿ, ಶಿರಸ್ತೇದಾರ್ ಡಿ.ಕೆ.ರಂಗಪ್ಪ, ಕಂದಾಯ ನೀರಿಕ್ಷಕ ಸಿದ್ದಲಿಂಗಸ್ವಾಮಿ, ಗ್ರಾಮಲೆಕ್ಕಾಧಿಕಾರಿ ದೇವರಾಜು, ಶಾಲಿನಿ ಇದ್ದರು.
ಎಲ್ಲ ರೈತರ ಮನೆಬಾಗಿಲಿಗೆ ದಾಖಲೆಗಳು: ಸರ್ಕಾರದ ಅದೇಶದಂತೆ ರೈತರ ಮನೆಬಾಗಿಲಿಗೆ ಪಹಣಿ, ಅಟ್ಲಾಸ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ತಲುಪಿಸಲಾಗುವುದು. ಮಾ.21ರಿಂದ 26ವರೆಗೆ ಎಲ್ಲ ರೈತರಿಗೂ ತಲುಪಿಸಲಾಗುವುದು ಎಂದು ತಹಸೀಲ್ದಾರ್ ತೇಜಸ್ವಿನಿ ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಈ ಹಿಂದೆ ಇದ್ದ 6800 ತಿದ್ದುಪಡಿ ಪ್ರಕರಣ ವಿಲೇವಾರಿ ಮಾಡಿದ್ದು, ಕೇವಲ 700 ತಿದ್ದುಪಡಿ ಬಾಕಿಯಿವೆ. ಪಿಂಚಣಿ ಯೊಜನೆಯಲ್ಲಿ ಅಕ್ರಮ ತಡೆಯಬೇಕೆಂದು ಒಟ್ಟು 31469 ಅರ್ಜಿಗಳನ್ನು ಪರಿಶೀಲಿಸಿ ಅವರಲ್ಲಿ ಪಾವತಿಯಾದಂತಹ ಹಾಗೂ ಅನರ್ಹರನ್ನು ಗುರುತಿಸಿ ಸುಮಾರು 3000 ಅರ್ಜಿ ವಜಾ ಮಾಡಲಾಗಿದೆ ಎಂದರು.
ತಹಸೀಲ್ದಾರ್ ನ್ಯಾಯಾಲಯದಲ್ಲಿದ್ದ 896 ತಕರಾರು ಪ್ರಕರಣಗಳಲ್ಲಿ ಇತ್ಯರ್ಥಗೊಳಿಸಿ ಇನ್ನು ಕೇವಲ 21 ಪ್ರಕರಣ ಬಾಕಿ ಇವೆ. ಅವುಗಳನ್ನೂ ಶೀಘ್ರದಲ್ಲೇ ಬಗೆಹರಿಸುವುದಾಗಿ ತಿಳಿಸಿದರು.