ಚಿತ್ತಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ತಹಸೀಲ್ದಾರ್ ಸೈಯ್ಯದ್ ಷಾಷಾವಲಿ, ತಾಪಂ ಇಒ ನೀಲಗಂಗಾ ಬಬಲಾದ, ಸಿಪಿಐ ಪ್ರಕಾಶ ಯಾತನೂರ ಇದ್ದರು. 
ಜಿಲ್ಲೆ

ಕೆಲಸ ಮಾಡಿ ಇಲ್ಲವೆ ವರ್ಗವಾಗಿ

ಚಿತ್ತಾಪುರ: ಈ ಹಿಂದೆ ಇಷ್ಟ ಬಂದಂತೆ ವರ್ತಿಸಿದ್ದೀರಿ. ಇನ್ಮುಂದೆ ನಡೆಯಲ್ಲ. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಇಲ್ಲವೆ ವರ್ಗಾವಣೆ ಮಾಡಿಕೊಂಡು ಬೇರೆಡೆ ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅನುದಾನ ತರುವುದು ನನಗೆ ಬಿಡಿ. ಈಗಾಗಲೇ ಬಿಡುಗಡೆಯಾದ ಅನುದಾನ ಖರ್ಚು ಮಾಡುವುದರತ್ತ ಗಮನಹರಿಸಿ. ಅನುದಾನ ಖರ್ಚಾಗದಿದ್ದರೆ ಮುಂದಿನ ಆರ್ಥಿಕ ವರ್ಷದಲ್ಲಿ ಯಾವ ಇಲಾಖೆಗೂ ದುಡ್ಡು ಬರಲ್ಲ. ಸರ್ಕಾರದ ಐದು ಗ್ಯಾರಂಟಿಗಳ ಲಾಭ ಜನರಿಗೆ ತಲುಪಿಸಲು ಶ್ರಮಿಸಬೇಕು ಎಂದು ತಾಕೀತು ಮಾಡಿದರು.

ಅರಣ್ಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸಾರ್ವಜನಿಕ ಸ್ಥಳ, ಶಾಲೆ ಹಾಗೂ ಸರ್ಕಾರಿ ಕಚೇರಿ ಆವರಣಗಳಲ್ಲಿ ಸಸಿ ನೆಡಬೇಕು. ಪಟ್ಟಣದಲ್ಲಿ ಒಂದೇ ಒಂದು ಸ್ವಚ್ಛ ಉದ್ಯಾನವನವಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ. ಮಾಡಬೂಳ ಬಳಿ ೨೯ ಕೋಟಿ ರೂ. ವೆಚ್ಚದಲ್ಲಿ ಪ್ರಾಣಿ ಸಂಗ್ರಹಾಲಯ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಈ ಕೂಡಲೇ ಪ್ರಸ್ತಾವನೆ ಸಲ್ಲಿಸಿ ಎಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಗೆ ಬಾರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿ. ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಿ. ಅಕ್ರಮ ಮರಳು ಮತ್ತು ಅಕ್ಕಿ ಮಾರಾಟಕ್ಕೆ ಕಡಿವಾಣ ಹಾಕಬೇಕು. ರೌಡಿಗಳನ್ನು ನಿಗ್ರಹಿಸಬೇಕು. ಚಿಂಚೋಳಿಯಿಂದ ಗಾಂಜಾ ಸರಬರಾಜು ಆಗುತ್ತಿರುವ ಮಾಹಿತಿಯಿದ್ದು, ಕಡಿವಾಣಕ್ಕೆ ಕಠಿಣ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಹಸೀಲ್ದಾರ್‌ಗಳಾದ ಸೈಯ್ಯದ್ ಷಾಷಾವಲಿ (ಚಿತ್ತಾಪುರ), ರಮಾವತಿ (ಕಾಳಗಿ), ತಾಪಂ ಇಒ ನೀಲಗಂಗಾ ಬಬಲಾದ, ಸಿಪಿಐ ಪ್ರಕಾಶ ಯಾತನೂರ ಇತರರಿದ್ದರು.

ಕೆಬಿಜೆಎನ್‌ಎಲ್, ಕೆಎನ್‌ಎನ್‌ಎಲ್, ಕೆಆರ್‌ಡಿಎಲ್, ಪಿಆರ್‌ಇ, ನಿರ್ಮಿತಿ ಕೇಂದ್ರ, ಆರ್‌ಡಿಡಬ್ಲ್ಯು ಇಲಾಖೆಗಳು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲೇಬೇಕು. ಅಧಿಕಾರಿಗಳು ಕೈಗೊಂಡ ಕಾಮಗಾರಿಗಳ ಕುರಿತು ಸಮಗ್ರ ಚರ್ಚೆಗೆ ಪ್ರತಿ ತಿಂಗಳು ೫ರಂದು ಸಭೆ ನಡೆಸಿ ೭ರಂದು ಅನುಪಾಲನಾ ವರದಿ ನನಗೆ ತಲುಪಿಸಬೇಕು.
| ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ