ಜಿಲ್ಲೆ

ಕೆಲಸ ಮಾಡದವರಿಗೆ ತಕ್ಕ ಪಾಠ ಕಲಿಸಿ

ಚಿತ್ರದುರ್ಗ: ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಪ್ರತಿನಿಧಿಯಾಗಿ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲರಾಗಿರುವ ವೈ.ಎ.ನಾರಾಯಣಸ್ವಾಮಿ ಮರು ಆಯ್ಕೆ ಬಯಸುವ ಅರ್ಹತೆ ಇಲ್ಲ. ಅವರಿಗೆ ಶಿಕ್ಷಕರು ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಕೋರಿದರು.
ನಗರದ ಮದಕರಿನಾಯಕ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ಶಿಕ್ಷಣ ಎಲ್ಲರ ಹಕ್ಕು, ಕಾಂಗ್ರೆಸ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಲಾಭ ಮಕ್ಕಳಿಗೆ ಸಿಗಬೇಕಿದೆ. ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದರು.
ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಒಪಿಎಸ್ ಜಾರಿಗೂ ಗಂಭೀರ ಚಿಂತನೆ ನಡೆಸಿದ್ದು, ಈ ಬಾರಿ ಹೊಸಮುಖ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಕೆಪಿಸಿಸಿ ಕಾರ್ಯದರ್ಶಿ ನೇರ‌್ಲಗುಂಟೆ ರಾಮಪ್ಪ ಮಾತನಾಡಿ, ಶಿಕ್ಷಕರ ಹಲವು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ. ನೀತಿ ಸಂಹಿತೆ ಕಾರಣಕ್ಕೆ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಪ್ರಾಧ್ಯಾಪಕನಾಗಿ ಕೆಲಸ ಮಾಡಿರುವ ನನಗೆ ಶಿಕ್ಷಕರ ಸಮಸ್ಯೆಗಳ ಅರಿವಿದೆ. ಸರ್ಕಾರ 7ನೇ ವೇತನ ಆಯೋಗದ ವರದಿಯನ್ನು ಒಪ್ಪಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಎಸ್‌ಎಂಎಲ್ ತಿಪ್ಪೇಸ್ವಾಮಿ, ಕೆ.ಪಿ.ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ, ಲಕ್ಷ್ಮೀಕಾಂತ, ಮುದಸಿರ್, ಖುದ್ದೂಸ್,ಲೋಕೇಶ್, ಮದಕರಿ ನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್, ಆಡಳಿತಾಧಿಕಾರಿಗಳಾದ ಸೂರ್ಯನಾರಯಣ, ಸಾಗರ್ ಮತ್ತಿತರರು ಇದ್ದರು.