ಕಲಘಟಗಿ: ಪಟ್ಟಣದ ಮೃತ್ಯುಂಜಯ ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದ ನಿವೃತ್ತ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ. ಸಕಾಲಕ್ಕೆ 108 ಆಂಬುಲೆನ್ಸ್ ಬಾರದಿರುವುದರಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ಪಟ್ಟಣದ ಕೆರಿ ಓಣಿಯ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಶಂಕರಯ್ಯ ಗುರುಶಾಂತಯ್ಯ ಹಿರೇಮಠ (62) ಮೃತಪಟ್ಟವರು.
ಘಟನೆ ಹಿನ್ನೆಲೆ: ಶಂಕರಯ್ಯ ಅವರು ಮಧ್ಯಾಹ್ನ ಕೆರೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಕಾಲು ಜಾರಿ ಬಿದ್ದಿದ್ದರು. ಈಜು ಬಾರದೇ ಒದ್ದಾಡಾತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಜನರು ನೀರಿಗಿಳಿದು ರಕ್ಷಿಸಿ, ತಕ್ಷಣವೇ 108
ಆಂಬುಲೆನ್ಸ್ಗೆ ಕರೆ ಮಾಡಿದ್ದರು. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬಾರದಿದ್ದಾಗ ಸ್ಥಳದಲ್ಲಿದ್ದ ಸಿಲಿಂಡರ್ ಸರಬರಾಜು ಮಾಡುವ ವಾಹನದಲ್ಲಿ ಶಂಕರಯ್ಯನನ್ನು ತಾಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಸಕಾಲಕ್ಕೆ ಆಂಬುಲೆನ್ಸ್ ಬಾರದ ಕಾರಣ ಶಂಕರಯ್ಯ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಮೃತನ ಸಂಬಂಧಿಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಬಸನಗೌಡ ಕರಿಗೌಡರ, ಆಸ್ಪತ್ರೆ ನೋಡಲ್ ಅಧಿಕಾರಿ ಡಾ.ಎಸ್.ಬಿ. ನಿಂಬಣ್ಣವರ ಅವರು ಘಟನೆಯ ಕುರಿತು ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇನ್ಸ್ ಪೆಕ್ಟರ್ ಪ್ರಭು ಸೂರಿನ್ ಅವರು ಪ್ರಕರಣದ ವಿಚಾರಣೆ ನಡೆಸುವುದು ಎಂದರು. ತಾಲೂಕು ವೈದ್ಯಾಧಿಕಾರಿ ಡಾ. ಬಸವರಾಜ ಬಾಸೂರ, ಸಿಬ್ಬಂದಿ ಇದ್ದರು.
ಬೇರೆಡೆ ನಿಯೋಜನೆ?: ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದಡಿ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಚವ್ಹಾಣ ಅವರನ್ನು ಬೇರೆಡೆ ನಿಯೋಜನೆ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.