ಕೆ.ಆರ್.ಪೇಟೆ: ಮಳೆ ಸುರಿದರೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಮಳೆಗಾಲ ಬಂತೆಂದರೆ ಬಸ್ ನಿಲ್ದಾಣ ಕೆರೆಯಂತಾಗುತ್ತಿದೆ. ಜೋರು ಮಳೆ ಸುರಿದರೆ ನಿಲ್ದಾಣ ಜಲಾವೃತಗೊಳ್ಳುತ್ತದೆ. ಅದರಂತೆ ಭಾನುವಾರ ರಾತ್ರಿ ಸುರಿದ ಮಳೆಗೆ ನಿಲ್ದಾಣ ಕೆರೆಯಂತಾಗಿತ್ತು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಕಳೆದ ತಿಂಗಳು ಸಹ ಮಳೆ ಸುರಿದು ನಿಲ್ದಾಣ ಜಲಾವೃತವಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಯಾಣಿಕರನ್ನು ನಿಲ್ದಾಣದಿಂದ ಹೊರ ತಂದಿದ್ದರು. ಬಳಿಕ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೀರು ನಿಲ್ಲದಂತೆ ಕ್ರಮವಹಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಇದುವರೆಗೂ ಕಾಮಗಾರಿ ಆರಂಭಿಸಿಲ್ಲ.
ನಿಲ್ದಾಣಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ನಿಲ್ದಾಣದ ಪಕ್ಕದಲ್ಲಿರುವ ರಾಜಕಾಲುವೆ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವಲ್ಲಿ ಪುರಸಭೆ ಅಧಿಕಾರಿಗಳ ವಿಫಲರಾಗಿದ್ದಾರೆ. ಹೀಗಾಗಿ ಪ್ರತಿ ಬಾರಿಯೂ ಮಳೆ ಬಂದಾಗ ಬಸ್ ನಿಲ್ದಾಣ ಕೆರೆಯಂತಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮಳೆಗಾಲದಲ್ಲಿ ನಿಲ್ದಾಣದಲ್ಲಿ ಓಡಾಡಲು ಕಷ್ಟಸಾಧ್ಯವಾಗಿದೆ. ಈ ಸಮಸ್ಯೆ ದೀರ್ಘಕಾಲದಿಂದ ಇದೆ. ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆಗೆ ಪರಿಹಾರ ದೊರೆತಿಲ್ಲ.
ರಘು ಎಂ.ಕೆ. ಮುದುಗೆರೆ, ಕೆ.ಆರ್.ಪೇಟೆ. ಪ್ರಯಾಣಿಕ
ಕೆರೆ ಜಾಗದಲ್ಲಿ ನಿಲ್ದಾಣ ನಿರ್ಮಾಣವಾಗಿದೆ. ಹೀಗಾಗಿ ಮಳೆ ಬಂದಾಗ ನಿಲ್ದಾಣ ಜಲಾವೃತಗೊಳ್ಳುತ್ತದೆ. ನೀರನ್ನು ತಾತ್ಕಾಲಿಕವಾಗಿ ಹೊರ ಹೋಗಲು ಕ್ರಮವಹಿಸಲಾಗಿದೆ. ನಿಲ್ದಾಣಕ್ಕೆ ತಡೆಗೋಡೆ ನಿರ್ಮಾಣ ಸಂಬಂಧ ಡಿಪಿಆರ್‌ನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ಬಳಿಕ ತಡೆಗೋಡೆ ನಿರ್ಮಿಸಿ ಶಾಶ್ವತ ಪರಿಹಾರ ರೂಪಿಸಲಾಗುವುದು.
ಕುಮಾರ್, ಮುಖ್ಯಾಧಿಕಾರಿ, ಪುರಸಭೆ ಕೆ.ಆರ್.ಪೇಟೆ.