ಜಿಲ್ಲೆ

ಕೆರೆಯಂಗಳ ಒತ್ತುವರಿ ತೆರವುಗೊಳಿಸಿ

ದೊಡ್ಡಬಳ್ಳಾಪುರ: ತಾಲೂಕಿನ ಪಾಲನಜೋಗಿಹಳ್ಳಿ ಕೆರೆಯ ಅಂಚಿನಲ್ಲಿ ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿಬಣದ) ಕಾರ್ಯಕರ್ತರು ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ನಗರಾಧ್ಯಕ್ಷ ಬಶೀರ್ ಮಾತನಾಡಿ, ಪಾಲನಜೋಗಿಹಳ್ಳಿ ಕೆರೆಗೆ ಹೊಂದಿಕೊಂಡಂತೆ ಖಾಸಗಿಯವರು ಬಡಾವಣೆ ಮಾಡುತ್ತಿದ್ದು, ಕೆರೆಯ ಅಂಗಳವನ್ನು ಮುಚ್ಚಿ ಸುಮಾರು 60 ಅಡಿ ಉದ್ದದ ರಸ್ತೆಯನ್ನು ನಿರ್ಮಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಪಾಲನಜೋಗಳ್ಳಿಯ ಸರ್ವೇ ನಂ.21ರಲ್ಲಿ 13 ಎಕರೆಯಲ್ಲಿ ಕೆರೆ ಇದ್ದು, ಖಾಸಗಿಯವರು ಕೆರೆಯ ಅಂಚಿನಲ್ಲಿ ರಸ್ತೆಗಾಗಿ ಒತ್ತುವರಿ ಮಾಡಲಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ಕಂದಾಯ ಅಧಿಕಾರಿಗಳು ಇದನ್ನು ನೋಡಿಯೂ ನೋಡದಂತೆ ವರ್ತಿಸುತ್ತಿದ್ದಾರೆ ಎಂದರು. ಮುಖಂಡ ಮಂಜುನಾಥ ಮಾತನಾಡಿ, ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ, ಕೆರೆಯ ಸಂರಕ್ಷಣೆ ಮಾಡಬೇಕು. ಅಧಿಕಾರಿಗಳು ಸ್ಪಂದಿಸದೆ ಇದ್ದರೆ ಕೆರೆಯ ಸ್ಥಳದಲ್ಲೇ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ತಾಲೂಕು ಕಚೇರಿ ಶಿರಸ್ತೇದಾರ ವಿನೋದ್ ಅವರಿಗೆ ಮನವಿ ಪತ್ರ ಸಲ್ಲಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಅಂತ್ಯಹಾಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಯಾಕೋಬ್ ಬೇಗ್, ಮುನಿರಾಜು, ಉಮೇಶ್, ಗಾಯತ್ರಿ ಮಂಜುನಾಥ್, ಮುಖಂಡರಾದ ಸೂರಿ, ಸಿರಾಜ್, ಶ್ರೀನಿವಾಸ್, ನೂರುಲ್ಲ, ಮುನಿಕೃಷ್ಣ, ರಾಜಣ್ಣ, ಇಮ್ತಿಯಾಜ್, ಮೋಹನ್ ಮತ್ತಿತರರಿದ್ದರು.