ಶಿರಸಿ: ನೀರಿನ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಜಾರಿಗೊಂಡ ಜಲಾಮೃತ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಗೆ ಅನುದಾನ ಮೊತ್ತ ಬಿಡುಗಡೆಯಾಗಿಲ್ಲ. ಹೀಗಾಗಿ, ಮಂಜೂರಾದ ಹತ್ತಾರು ಕೆರೆಗಳ ಜೀಣೋದ್ಧಾರ ಕಾಮಗಾರಿ ಕಾರ್ಯಾನುಷ್ಠಾನಗೊಂಡಿಲ್ಲ.
ಬರ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರವು 2019-20ನೇ ಸಾಲಿನ ಬಜೆಟ್ನಲ್ಲಿ ಘೊಷಿಸಿದ್ದ ಜಲಾಮೃತ ಯೋಜನೆಯು ಜಿಲ್ಲೆಯಲ್ಲಿ ಬರೀ ಘೊಷಣೆಯಾಗಿ ಉಳಿದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನದಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲಾಮೃತ ಯೋಜನೆಗೆ 2020ರ ಏಪ್ರಿಲ್ನಲ್ಲಿ ಅನುದಾನ ಬಿಡುಗಡೆಗೊಂಡು ಕೆರೆ ಪುನರುಜ್ಜೀವನದ ಕಾಮಗಾರಿಗಳು ಆರಂಭಗೊಳ್ಳಬೇಕಿತ್ತು. ಆದರೆ, ಸರ್ಕಾರವು ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದ ಪರಿಣಾಮ ಮಳೆಗಾಲಪೂರ್ವ ನಡೆಯಬೇಕಿದ್ದ ಕೆರೆ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿಲ್ಲ. ಇದರಿಂದ ಜಿಲ್ಲಾದ್ಯಂತ ಜಲ ಸ್ವಾವಲಂಬನೆಗೆ ಹಿನ್ನಡೆಯಾಗಿದೆ.
ಆರಂಭ ಕಾಣದ 79 ಕೆರೆಗಳ ಕಾಮಗಾರಿ: ಯೋಜನೆಯಡಿ ಜಿಲ್ಲೆಯ 11 ತಾಲೂಕುಗಳಲ್ಲಿ ಆಯ್ದ ಕೆರೆಗಳ ಜೀಣೋದ್ಧಾರ ಕಾಮಗಾರಿಯ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅವುಗಳಲ್ಲಿ 79 ಕೆರೆಗಳ ಅಭಿವೃದ್ಧಿಗೆ ಅಂದಾಜು 6.19 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ತಿಳಿಸಿತ್ತು. ಅದರಂತೆ ಕೆರೆಗಳ ಜೀಣೋದ್ಧಾರ ಕಾಮಗಾರಿಗೆ ಬೇಕಾದ ಸಿದ್ಧತೆ ಕೂಡ ನಡೆದಿತ್ತು. ಆದರೆ, ಕರೊನಾ ಲಾಕ್ಡೌನ್ ಕಾರಣದಿಂದ ಎದುರಾದ ಆರ್ಥಿಕ ಹೊರೆಯಿಂದ ಸರ್ಕಾರವು ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ಪ್ರತಿ ತಾಲೂಕಿನಲ್ಲಿ ಸರಾಸರಿ 5 ಕೆರೆಗಳು ಅಭಿವೃದ್ಧಿಯಿಂದ ಕುಂಠಿತವಾಗುವಂತಾಗಿದೆ.
ಮಳೆ ಆರಂಭದಿಂದ ಹಿನ್ನಡೆ: ನಿರೀಕ್ಷೆಯಂತೆ ಏಪ್ರಿಲ್ ತಿಂಗಳಲ್ಲಿ ಅನುದಾನ ಬಿಡುಗಡೆಯಾಗಿದ್ದರೆ ಮೇ ತಿಂಗಳಲ್ಲಿ ಕಾಮಗಾರಿಗಳ ನಿರೀಕ್ಷಿತ ಗುರಿ ಸಾಧನೆಗೆ ಅನುಕೂಲ ಆಗುತ್ತಿತ್ತು. ಆದರೆ, ಪ್ರಸ್ತುತ ಮಳೆಗಾಲ ಆರಂಭವಾಗಲಿದ್ದು, ಈ ವೇಳೆ ಕೆರೆಗಳ ಹೂಳೆತ್ತುವ ಕಾರ್ಯದ ಹಾಗೂ ಇತರ ಕಾಮಗಾರಿ ನಡೆಸುವುದು ಕಷ್ಟಸಾಧ್ಯ. ಹೀಗಾಗಿ, ಎರಡು ವರ್ಷಗಳಲ್ಲಿ ಜಲಮೂಲಗಳ ಪುನಶ್ಚೇತನದ ಗುರಿಯೊಂದಿಗೆ ಜಾರಿಗೊಂಡ ಈ ಯೋಜನೆಯು ಒಂದು ವರ್ಷ ಯಾವುದೇ ಬೆಳವಣಿಗೆಯಿಲ್ಲದೆ ಕಳೆದಂತಾಗುತ್ತದೆ. ಇನ್ನು ಮಳೆಗಾಲದ ನಂತರವೇ ಕೆರೆಗಳ ಕಾಮಗಾರಿ ನಡೆಯುವ ಕಾರಣ ಯೋಜನೆಗೆ ಹಿನ್ನಡೆಯಾಗಲಿದೆ ಎಂಬುದು ಜಲತಜ್ಞರ ಅಭಿಪ್ರಾಯ.
ಜಲಕ್ಷಾಮ ದೂರ ಮಾಡಲು ಜಲಾಮೃತ ಯೋಜನೆ ತುಂಬ ಸಹಕಾರಿಯಾಗಿದೆ. ಆದರೆ, ಈ ಸಮುದಾಯ ಚಾಲಿತ ಸಮಗ್ರ ಕಾರ್ಯಕ್ರಮ ಯೋಜನೆಗೆ ಕರೊನಾ ಕಾರಣವೊಡ್ಡಿ ಅನುದಾನ ಬಿಡುಗಡೆ ಮಾಡದಿರುವುದು ಸರಿಯಲ್ಲ. ಎರಡು ವರ್ಷಗಳಲ್ಲಿ ಜಲಮೂಲಗಳ ಪುನಶ್ಚೇತನದ ಗುರಿ ಹೊಂದಿರುವ ಸರ್ಕಾರ ತಕ್ಷಣ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಲು ಅವಕಾಶ ನೀಡಬೇಕು. ಶ್ರೀನಿವಾಸ ಹೆಬ್ಬಾರ- ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷಕಳೆದ ಬಾರಿ ಅತಿಯಾದ ಮಳೆಯಿಂದ ಕೆರೆ ಕಾಮಗಾರಿ ಕೈಗೊಳ್ಳಲು ಆಗಿರಲಿಲ್ಲ. ಈ ಬಾರಿ ಕೋವಿಡ್ 19 ಕಾರಣದಿಂದ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಕೈಗೊಳ್ಳುವುದು ಸಾಧ್ಯವಿರಲಿಲ್ಲ. ಈ ಎಲ್ಲ ತಾಂತ್ರಿಕ ತೊಂದರೆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಸರ್ಕಾರ ಕೂಡ ಸ್ಪಂದಿಸಿದೆ. ಮುಂಬರುವ ದಿನಗಳಲ್ಲಿ ಹಣ ಬಿಡುಗಡೆಯಾಗುವ ವಿಶ್ವಾಸವಿದೆ. ಎಂ.ರೋಶನ್, ಜಿಲ್ಲಾ ಪಂಚಾಯಿತಿ ಸಿಇಒ