ಅರಕಲಗೂಡು ತಾಲೂಕಿನ ಕೊಡಕಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಕಸ ವಿಲೇವಾರಿ ಘಟಕವನ್ನು ಶಾಸಕ ಎ.ಮಂಜು ಉದ್ಘಾಟಿಸಿದರು. ಅಶೋಕ್, ಮಂಜುನಾಥ್, ಪುಟ್ಟರಾಜು ಇತರರಿದ್ದರು. 
ಜಿಲ್ಲೆ

ಕೆರೆಗಳಿಗೆ ನೀರು ತುಂಬಿಸಲು ಪ್ರಸ್ತಾವನೆ

 ಅರಕಲಗೂಡು: ಹೇಮಾವತಿ ಬಲ ಮೇಲ್ದಂಡೆ ನಾಲೆ ಮೂಲಕ ತಾಲೂಕಿನ ದೊಡ್ಡಮಗ್ಗೆ ಗ್ರಾಪಂ ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಸರ್ಕಾರಕ್ಕೆ ಐದು ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಶಾಸಕ ಎ.ಮಂಜು ಮಾಹಿತಿ ನೀಡಿದರು.

ತಾಲೂಕಿನ ಕೊಡಕಳ್ಳಿ ಗ್ರಾಮದಲ್ಲಿ ಶುಕ್ರವಾರ 18.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಸ ವಿಲೇವಾರಿ ಘಟಕ ಉದ್ಘಾಟಿಸಿ ಮಾತನಾಡಿದರು. ಈ ಭಾಗದ ಬರಗೂರು, ಲಕ್ಷ್ಮೀಪುರ, ಕಲ್ಕೆರೆ ಸುತ್ತಲಿನ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗಿದೆ. ಮಲ್ಲಿಪಟ್ಟಣ ಏತನೀರಾವರಿ ಯೋಜನೆಯಿಂದಾಗಿ ಕಣಿಯಾರು ಏತ ನೀರಾವರಿ ಯೋಜನೆ ಕೈಬಿಡಲಾಗಿದೆ ಎಂದು ತಿಳಿಸಿದರು.

ಶುಚಿತ್ವಕ್ಕೆ ಗ್ರಾಮ ಪಂಚಾಯಿತಿಗಳು ಹೆಚ್ಚಿನ ಒತ್ತು ನೀಡಬೇಕು. ಕಸ ವಿಲೇವಾರಿ ಘಟಕ ನಿರ್ಮಿಸಿದರೆ ಸಾಲದು, ಅವುಗಳ ನಿರ್ವಹಣೆಯೂ ಅಷ್ಟೇ ಅವಶ್ಯಕ. ಘಟಕಗಳ ಸುತ್ತಮುತ್ತ ಕೃಷಿ ಜಮೀನು ಇದ್ದು, ಜಾನುವಾರುಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ನಿಗಾ ವಹಿಸಬೇಕು. ಎಲ್ಲ ಗ್ರಾಮ ಪಂಚಾಯಿತಿಗಳು ಕಸ ವಿಲೇವಾರಿ ಘಟಕ ಸ್ಥಾಪಿಸಿ ಸೂಕ್ತ ನಿರ್ವಹಣೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖಂಡ ಪಟೇಲ್ ರಾಜೇಗೌಡ, ಜಿಪಂ ಮಾಜಿ ಸದಸ್ಯ ರವಿ, ತಾಪಂ ಮಾಜಿ ಸದಸ್ಯ ನರಸೇಗೌಡ, ಗ್ರಾಪಂ ಅಧ್ಯಕ್ಷ ಅಶೋಕ್, ಸದಸ್ಯರು ಇದ್ದರು.