ಗುಂಡ್ಲುಪೇಟೆ: ತಾಲೂಕಿನ 110 ಕೆರೆಗಳಿಗೆ ಸದ್ಯದಲ್ಲೇ ನದಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.
ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಎಚ್.ಕೆ.ಶಿವಣ್ಣ ಕಲಾಮಂದಿರ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕಳೆದ ಮೂರು ದಶಕದಲ್ಲಿ ಮಳೆಯ ಕೊರತೆ ಹಾಗೂ ಅಂತರ್ಜಲ ಮಟ್ಟದ ಇಳಿಕೆಯಿಂದ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾದ ನಂತರ ಪ್ರತಿ ವರ್ಷ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಿದ್ದು, ಈ ಬಾರಿ ಉತ್ತಮ ಮಳೆಬಿದ್ದ ಪರಿಣಾಮ ಕೆರೆಕಟ್ಟೆಗಳು ತುಂಬಿವೆ. ಇನ್ನುಳಿದ 110 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಗ್ರಾಮಸ್ಥರ ಕೋರಿಕೆ ಮೇರೆಗೆ ಕಲಾಮಂದಿರ ನಿರ್ಮಿಸಲಾಗಿದ್ದು, ಮಲೆ ಮಹದೇಶ್ವರ ಬೆಟ್ಟದ ಧರ್ಮದರ್ಶಿ ಮಂಡಲಿ ಅಧ್ಯಕ್ಷರಾಗಿದ್ದ ದಿ.ಎಚ್.ಕೆ. ಶಿವಣ್ಣ ಅವರ ಹೆಸರಿಡಲಾಗಿದೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಉನ್ನತೀಕರಿಸಲಾಗುತ್ತಿದೆ ಎಂದರು.
ಗ್ರಾಮದ ರೈತರು ಹಾಗೂ ಕಾರ್ಮಿಕರು ನರೇಗಾ ಯೋಜನೆಯಲ್ಲಿ ಕೊಟ್ಟಿಗೆ ರಸ್ತೆ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ನಾಡಕಚೇರಿ ಮಟ್ಟದಲ್ಲಿ ದೊರಕುವ ಬಹುತೇಕ ಸವಲತ್ತುಗಳನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಒದಗಿಸಲಾಗುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯಮ್ಮ, ಉಪಾಧ್ಯಕ್ಷ ಸೋಮಶೇಖರ್, ಸದಸ್ಯರಾದ ಮಹದೇವಸ್ವಾಮಿ, ಶಿವನಾಗಮ್ಮ, ಶಿವಮೂರ್ತಿ, ಮಂಜು, ಸುರೇಶ್, ಮಾಜಿ ಅಧ್ಯಕ್ಷ ಕೆಂಪಣ್ಣ, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಆರ್.ಲೋಕೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹೇಶ್, ವಕೀಲ ಆನಂದ್‌ರಾಜಣ್ಣ, ಮುಖಂಡರಾದ ನಾಗೇಂದ್ರ, ವಿಶ್ವನಾಥ್, ಮಹೇಂದ್ರ ಇತರರು ಇದ್ದರು.