ಜಿಲ್ಲೆ

ಕೆರೆಗಳ ವೀಕ್ಷಣೆ, ಬಯಲುಸೀಮೆ ಬಾಗಿನ ಸಮರ್ಪಣೆ

ಚಿತ್ರದುರ್ಗ: ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ತಾಲೂಕಿನ ಕಾತ್ರಾಳ್ ಕೆರೆಗೆ ಶುಕ್ರವಾರ ಬಯಲುಸೀಮೆ ಬಾಗಿನ ಸಮರ್ಪಿಸಿದರು. ಈ ಮೂಲಕ ಭರಮಸಾಗರ ಏತ ನೀರಾವರಿ ಯೋಜನೆ ವ್ಯಾಪ್ತಿಯ 25 ಕೆರೆ ವೀಕ್ಷಿಸುವ 3 ದಿನದ ಪ್ರವಾಸ ಆರಂಭಿಸಿದರು.

ನಂತರ ನಡೆದ ಅಚ್ಚುಕಟ್ಟುದಾರರ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಈ ಕೆರೆ ಏರಿ ವಿಸ್ತರಿಸಲು 2 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಸದ ಸಿದ್ದೇಶ್ವರ್ ಈ ಸಂಬಂಧ ಅನುದಾನ ತರಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಪ್ರಕೃತಿಯಲ್ಲಿ ನೀರಿಗೆ ಕೊರತೆ ಇಲ್ಲ, ಸಕಲ ಜೀವರಾಶಿಗಳಿಗೂ ಇದರ ಅಗತ್ಯ ತುಂಬಾ ಇದೆ. ಭಗವಂತ ಸ್ವಾರ್ಥಿಯೂ ಅಲ್ಲ, ಎಲ್ಲವನ್ನೂ ಕರುಣಿಸಿದ್ದಾನೆ. ಸರಿಯಾಗಿ ವಿತರಣೆ, ಸದ್ಬಳಕೆ ಆಗಬೇಕಿದೆ. ಕೆರೆಗಳು ತುಂಬಿದ್ರೆ ಸಂಪತ್ತು ತಾನಾಗಿಯೇ ಬರುತ್ತದೆ. ಹೀಗಾಗಿ ರಾಜ, ಮಹಾರಾಜರು, ಪಾಳೆಗಾರರ ಕಾಲದಲ್ಲಿ ಜನರ ಹಿತಕ್ಕಾಗಿ ಕೆರೆ-ಕಟ್ಟೆಗಳು ನಿರ್ಮಾಣವಾಗಿವೆ ಎಂದರು.

ಏತ ನೀರಾವರಿ ಯೋಜನೆಯಡಿ 42 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಪ್ರತಿ ಕೆರೆಗೂ ಮಹತ್ವವಿದ್ದು, ಭರಮಣ್ಣನಾಯಕ ಕೆರೆ 3 ಶತಮಾನಗಳ ಬಳಿಕ ತುಂಬಿದ್ದು, ರೈತರ ಸಂತಸ ಇಮ್ಮಡಿಗೊಳಿಸಿದೆ. ಕಾತ್ರಾಳು ಕೆರೆ 1902ರಲ್ಲಿ ನಿರ್ಮಾಣವಾಯಿತೆಂದು ಹೇಳಲಾಗುತ್ತಿದೆ. ಇವುಗಳ ಸಂಪೂರ್ಣ ಮಾಹಿತಿ ಮುಂದಿನ ಪೀಳಿಗೆಗೆ ಅಗತ್ಯವಿದೆ. ಹೀಗಾಗಿ ಇತಿಹಾಸ ಸಂಗ್ರಹಿಸಿ, ಪುಸ್ತಕ ರೂಪದಲ್ಲಿ ಪ್ರಕಟಿಸಲು ತರಳಬಾಳು ಮಠ ಇಚ್ಚಿಸಿದೆ. ಸಂಶೋಧಕರ ನೆರವು ಪಡೆದು ಲೇಖನ ಪೂರೈಸುವ ಜವಾಬ್ದಾರಿ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರಿಗೆ ನೀಡಲಾಗಿದೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಜೆಸಿಬಿ ಯಂತ್ರಗಳಿವೆ. ಆದರೆ, ಹಿಂದಿನ ಜನರು ದೈಹಿಕ ಶ್ರಮದಿಂದ ಕೆರೆ ಕಟ್ಟಿದ್ದಾರೆ. ಅವರಿಗೆ ಕೃತಜ್ಞರಾಗಿರಬೇಕು. ನೀರು ಕೆರೆಗಳಿಗೆ ಹರಿದು ಬಂದಿದ್ದು, ದುಡಿಮೆಯ ಫಲ ಸನ್ಮಾರ್ಗದಲ್ಲಿ ಸಾಗಿ, ಸತ್ಕಾರ್ಯಗಳಿಗೆ ಬಳಸಿಕೊಳ್ಳಿ. ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಸುರಿಯಬೇಡಿ ಎಂದು ಸಲಹೆ ನೀಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಶ್ರೀಗಳ ಪ್ರಯತ್ನದ ಫಲದಿಂದಾಗಿ ಬೇಲೂರು, ಹಳೆಬೀಡು ಸೇರಿ ವಿವಿಧ ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬಂದಿದೆ. ಉಬ್ರಾಣಿ, ಜಗಳೂರು ಏತ ನೀರಾವರಿ ಅನುಷ್ಠಾನ ಸಾಕಾರವಾಗಿವೆ. ರಾಜಕಾರಣಿಗಳ, ಅಧಿಕಾರಿಗಳ ಮೂಲಕ ಯೋಜನೆ ಜಾರಿಗೆ ಶ್ರಮಿಸಿದ್ದಾರೆ ಎಂದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ 25 ವರ್ಷವಾದರೂ ಪೂರ್ಣಗೊಂಡಿಲ್ಲ. ಆದರೆ, ಯಾರೂ ಮನವಿ ಮಾಡದಿದ್ದರೂ ತರಳಬಾಳು ಶ್ರೀಗಳ ಚಿಂತನೆ, ಇಚ್ಚಾಶಕ್ತಿಯಿಂದಾಗಿ 565 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ ಸಾಕಾರಗೊಳಿಸಿದ್ದಾರೆ. ಇದು ನಿಜಕ್ಕೂ ಮಹತ್ಕಾರ್ಯ ಎಂದು ಬಣ್ಣಿಸಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಬಿಜೆಪಿ ಮುಖಂಡ ಜಿ.ಎಸ್.ಅನಿತ್‌ಕುಮಾರ್, ಕೆರೆ ವೀಕ್ಷಣೆ ಉಸ್ತುವಾರಿ ಜಿ.ಬಿ.ತೀರ್ಥಪ್ಪ, ಮುಖಂಡರಾದ ಜಿ.ಬಿ.ಶೇಖರ್, ಕೋಟೆ ಶಿವಕುಮಾರ್, ಸತ್ಯನಾರಾಯಣರೆಡ್ಡಿ, ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್, ನಂದಿ ನಾಗರಾಜ್, ರೈತ ಮುಖಂಡರಾದ ಹಿರೇಕಬ್ಬಿಗೆರೆ ನಾಗರಾಜ್, ಬಸ್ತಿಹಳ್ಳಿ ಸುರೇಶ್‌ಬಾಬು, ಹಂಪಯ್ಯನಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮುದ್ದಾಪುರ ನಾಗರಾಜ್, ನೇತ್ರ ತಜ್ಞ ಡಾ.ಉಜ್ಜಿನಪ್ಪ, ನೀರಾವರಿ ಇಲಾಖೆ ಇಂಜಿನಿಯರ್‌ಗಳಾದ ಮಂಜುನಾಥ್, ಅಣ್ಣಪ್ಪ ಇತರರಿದ್ದರು.