ಆನೇಕಲ್: ಕೆರೆಗಳ ರಕ್ಷಣೆಗೆ ಸರ್ಕಾರದ ಜತೆಗೆ ಸ್ಥಳೀಯರು ಕೂಡ ಕೈಜೋಡಿಸುವ ಮೂಲಕ ಕೆರೆ, ಕುಂಟೆ, ಕಲ್ಯಾಣಿಗಳ ರಕ್ಷಣೆಗೆ ಪಣತೊಡಬೇಕು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ್ ಸಾಲಿಯಾನ್ ಕರೆ ನೀಡಿದರು.
ತಾಪಂ ಸಭಾಂಗಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಎನ್ವಿರೋನ್ಮೆಂಟ್ ಸಪೋರ್ಟ್ ಗ್ರ್ರೂಪ್, ಕೆರೆ ಸಂರಕ್ಷಣಾ ಸಮಿತಿ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ತಾಲೂಕುಮಟ್ಟದ ಕೆರೆ ಸಂರಕ್ಷಣೆ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕುಮಟ್ಟದ ಕೆರೆ ಸಂರಕ್ಷಣಾ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾಷಣದಲ್ಲಿ ಅನ್ಯರನ್ನು ದೂರುವುದು, ಆದೇಶ ಮಾಡುವುದರಿಂದ ಪರಿಸರ ಅಥವಾ ಕೆರೆಗಳ ರಕ್ಷಣೆ ಸಾಧ್ಯವಿಲ್ಲ. ನಾವು ನಮ್ಮ ಜವಾಬ್ದಾರಿ ಅರಿತು ನಡೆಯಬೇಕು. ಕೆರೆಗಳ ರಕ್ಷಣೆ ಹೇಗೆ ಮಾಡಬೇಕು ಎನ್ನುವುದನ್ನು ತಿಳಿಯಲು 2014ರ ಸಂರಕ್ಷಣಾ ಕಾಯ್ದೆ ಓದಬೇಕು ಎಂದರು.
ನಾವು ಆಯ್ಕೆ ಮಾಡಿದವರನ್ನು ಪ್ರಶ್ನೆ ಮಾಡುವ ಹಕ್ಕು ನಮಗಿದೆ. ಗ್ರಾಪಂ ಸದಸ್ಯರಿಗೆ ಅವರ ವ್ಯಾಪ್ತಿಯಲ್ಲಿ ಎಷ್ಟು ಕೆರೆ ಇವೆ ಎನ್ನುವ ಮಾಹಿತಿ ಇಲ್ಲ. ಇಂತಹ ಜನಪ್ರತಿನಿಧಿಗಳಿಂದ ಬದಲಾವಣೆ ಹೇಗೆ ಸಾಧ್ಯ ಎಂದರು.
ನಮ್ಮ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರ ಉಳಿಸಬೇಕು ಎನ್ನುವ ಅರಿವು ಎಲ್ಲರಿಗೂ ಇರಬೇಕು. ನಮ್ಮ ಮಕ್ಕಳ ಕೈ ಮಣ್ಣಾಗಬಾರದು ಎಂಬ ಭಾವನೆ ಸರಿಯಲ್ಲ. ಮಕ್ಕಳಿಗೆ ಪರಿಸರ, ಕೆರೆ, ಕುಂಟೆಗಳ ಉಳಿವಿಗೆ ಜಾಗೃತಿ ಮೂಡಿಸಬೇಕು. ದೇಶಕ್ಕಾಗಿ ಯುವ ಶಕ್ತಿ ಒಂದಾಗಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ವೈ. ಪ್ರಕಾಶ್ ಮಾತನಾಡಿ, ತಾಲೂಕಿನ ಹಲವು ಕೆರೆಯಲ್ಲಿ ರಸಾಯನಿಕ ಮಿಶ್ರಿತ ತ್ಯಾಜ್ಯ ತುಂಬಿದೆ. ಕೆಲ ಕೈಗಾರಿಕೆಗಳಿಂದ ನೇರವಾಗಿ ತ್ಯಾಜ್ಯ ಕೆರೆಗೆ ಸೇರುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಬಿದರಗುಪ್ಪೆ ಹಾಗೂ ಬಳ್ಳೂರು ಕೆರೆ ಅವನತಿಯ ಬಗ್ಗೆ ಎಲ್ಲರಿಗೂ ಅರಿವಿದೆ. ಆದರೆ ಕೆರೆ ಉಳಿವಿಗೆ ಯಾರೊಬ್ಬರೂ ಮುಂದಾಗುತ್ತಿಲ್ಲ ಎಂದು ಬೇಸರಿಸಿದರು.
ತಾಪಂ ಇಒ ಲಕ್ಷ್ಮೀನಾರಾಯಣ ಮಾತನಾಡಿ, ತಾಲೂಕಿನಲ್ಲಿ ಕೆರೆಗಳ ಉಳಿವಿಗಾಗಿ ಸಿಎಸ್‌ಆರ್ ಅನುದಾನದಲ್ಲಿ ಹಲವಾರು ಕಡೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದನ್ನು ಮುಂದುವರಿಸಲಾಗುವುದು ಎಂದರು.
ಇಎಸ್‌ಜಿ ಸಂಸ್ಥೆಯ ಭಾರ್ಗವಿ, ಎಂ.ಈಶ್ವರಪ್ಪ, ಲಿಯೋ ಎ್.ಸಲ್ಮಾನ ಮತ್ತಿತರರು ಇದ್ದರು.
ಗರಂ ಆದ ನ್ಯಾಯಾಧೀಶರು: ಆನೇಕಲ್‌ನಲ್ಲಿ ಮೊದಲ ಬಾರಿಗೆ ಜಿಲ್ಲಾ ನ್ಯಾಯಾಧೀಶ ಸಂದೀಪ್ ಸಾಲಿಯಾನ್ ಅಧಿಕಾರಿಗಳ ಸಭೆ ಕರೆದು ಕೆರೆಗಳ ರಕ್ಷಣೆಯ ಬಗ್ಗೆ ಚರ್ಚೆ ನಡೆಸಿದ್ದರು. ಆದರೆ ಸಭೆಯಲ್ಲಿ ಕೆಲವರು ಮಾತಿನಲ್ಲಿ ಮಗ್ನರಾಗಿದ್ದರು. ಇದರಿಂದ ಕೆರಳಿದ ನ್ಯಾಯಾಧೀಶರು ಸಭೆಯಲ್ಲಿ ಇರಲು ಮನಸ್ಸಿನಲ್ಲದವರು ಹೊರನಡೆಯಿರಿ ಎಂದು ಗರಂ ಆದರು.
ಯಾರೋ ಬರುತ್ತಾರೆ ಏನೋ ಹೇಳುತ್ತಾರೆ ಎನ್ನುವ ಭಾವನೆ ಸರಿಯಲ್ಲ. ಈ ಬಗ್ಗೆ ಅಸಡ್ಡೆ ತೋರಿದರೆ ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸಮಯ ಮೀಸಲಿಡಬೇಕು: ನಾವು ಸಮಾಜದ ಅಭ್ಯುದಯಕ್ಕಾಗಿ ಸಮಯ ಮೀಸಲಿಡಬೇಕು. ನನಗೂ ಕೂಡ ಎಲ್ಲರಂತೆ ದಿನದಲ್ಲಿ 24 ಗಂಟೆ ಇರುವುದು. ಕೆಲಸದ ನಡುವೆಯೂ ಸೇವೆಗೂ ಆದ್ಯತೆ ನೀಡಲಾಗಿದೆ. ಸಮಯ ಇಲ್ಲ ಎನ್ನುವುದು ಸಮರ್ಪಕವಾದ ಉತ್ತರವಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇರುವುದು ಜನ ಸೇವೆಗೆ ಎಂದು ಅರಿಯಬೇಕು ಎಂದು ಸಂದೀಪ್ ಸಾಲಿಯಾನ್ ಹೇಳಿದರು.
ಜಿಗಣಿ ಕೆರೆಯನ್ನು ನಿರ್ಲಕ್ಷ್ಯ ಮಾಡದಿರಿ: ಜಿಗಣಿ ಕೆರೆ ಕಲುಷಿತಗೊಂಡಿದ್ದರೂ ಸ್ವಚ್ಛತೆಗೆ ಯಾರೊಬ್ಬರೂ ಮುಂದೆ ಬಂದಿಲ್ಲ. ಈ ಹಿಂದೆ ನಾವು ಕೆರೆ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕೆರೆಯನ್ನು ಸ್ವಚ್ಛ ಮಾಡುವುದಾಗಿ ತಿಳಿಸಿದ್ದರು. ಆದರೆ ಇದುವರೆಗೆ ಕೆಲಸ ಪ್ರಾರಂಭ ಆಗಿಲ್ಲ. ಕೆರೆ ಉಳಿಸಲು ಏಕೆ ಇಷ್ಟೊಂದು ನಿರ್ಲಕ್ಷ್ಯ ಎನ್ನುವುದು ನನಗೆ ಅರ್ಥ ಆಗುತ್ತಿಲ್ಲ. ನಮ್ಮ ದೇಶದ ಅರಣ್ಯ, ಪರಿಸರ,ಕೆರೆ ರಕ್ಷಣೆ ಆಗದ ಹೊರತು ಬದಲಾವಣೆ ಸಾಧ್ಯವಿಲ್ಲ ಎಂದು ಸಂದೀಪ್ ಸಾಲಿಯಾನ್ ಅಭಿಪ್ರಾಯಪಟ್ಟರು.