ಬಾಗಲಕೋಟೆ ತಾಲೂಕಿನ ಬಸರಿಕಟ್ಟಿ ಗ್ರಾಮದ ಕೆರೆ ಸುಧಾರಣೆ ಕಾಮಗಾರಿಗೆ ಶಾಸಕ ಎಚ್.ವೈ.ಮೇಟಿ ಶನಿವಾರ ಭೂಮಿ ಪೂಜೆ ನೆರವೇರಿಸಿದರು. 
ಜಿಲ್ಲೆ

ಕೆರೆಕಟ್ಟೆಗಳಿಂದ ಜೀವ ಸಂಕುಲಕ್ಕೆ ವರದಾನ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಗ್ರಾಮಗಳಲ್ಲಿನ ಗೋಕಟ್ಟೆ, ಕೆರೆ ಮತ್ತಿತರ ನೀರಿನ ಹರಿವು ಇರುವ ಸ್ಥಳಗಳ ಅಭಿವೃದ್ಧಿಯಿಂದ ಜಾನುವಾರು, ಪ್ರಾಣಿ ಪಕ್ಷಿ ಮತ್ತಿತರ ಜೀವ ಸಂಕುಲಕ್ಕೆ ವರದಾನವಾಗುತ್ತದೆ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.

ತಾಲೂಕಿನ ಬಸರಿಕಟ್ಟಿ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಉತ್ತರ ವಲಯ ವಿಜಯಪುರ ವತಿಯಿಂದ ಪ್ರವಾಹದಿಂದ ಹಾನಿಗೊಳಗಾದ ಅಂದಾಜು ಮೊತ್ತ ೫ ಕೋಟಿ ರೂ, ಅನುದಾನದಲ್ಲಿ ಕೆರೆ ಸುಧಾರಣೆ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೆರೆಗಳನ್ನು ಅಭಿವೃದ್ಧಿ ಪಡಿಸುವುದರಿಂದ ಕೆರೆಗಳಲ್ಲಿ ಹೆಚ್ಚು ನೀರು ಸಂಗ್ರಹವಾಗುತ್ತದೆ. ಇದರಿಂದ ಅಂತರ್ಜಲ ವೃದ್ಧಿಯಾಗಿ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಅಲ್ಲದೆ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿನ ಅನುಕೂಲವಾಗುತ್ತದೆ. ಕೆರೆ ಕಾಮಗಾರಿಯಲ್ಲಿ ಗ್ರಾಮಸ್ಥರ ಪಾತ್ರ ಮಹತ್ವದ್ದಾಗಿದ್ದು. ಯೋಜನೆಯ ಅವಕಾಶವನ್ನು ಉತ್ತಮ ರೀತಿಯಲ್ಲಿ ಗ್ರಾಮಸ್ಥರು ಬಳಸಿಕೊಂಡು ಕೆರೆಕಟ್ಟೆಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಈಗಾಗಲೇ ನೀರಿನ ಅಂತರ್ಜಲಮಟ್ಟ ಹೆಚ್ಚಿಸುವ ದಿಸೆಯಿಂದ ಸರ್ಕಾರ ಅಗತ್ಯ ಅನುದಾನ ನೀಡುವತ್ತ ಹೆಜ್ಜೆ ಇಟ್ಟಿದ್ದು. ಕೂಡಲೇ ಕ್ಷೇತ್ರಾದ್ಯಂತ ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಯೋಜನೆಯನ್ನು ಕ್ಷೇತ್ರದಲ್ಲಿ ತರಲಾಗುವುದು ಎಂದರು.

ಕಾAಗ್ರೆಸ್ ಮುಖಂಡ ನಿಂಗಪ್ಪ ಕೋಟಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇವಲ ಗ್ಯಾರಂಟಿಗಳಿಗೆ ಮಾತ್ರ ಮಹತ್ವ ನೀಡಿಲ್ಲ, ಮುಂದುವರಿದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕ್ಷೇತ್ರದ ಶಾಸಕರಿಗೆ ಅಗತ್ಯ ಅನುದಾನ ನೀಡುತ್ತಿದ್ದು. ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಗಳ ಕಾರ್ಯ ಬರದಿಂದ ಸಾಗಲಿದೆ ಎಂದು ತಿಳಿಸಿದರು.

ಜಿ.ಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಚಿಕ್ಕ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ್ ನಾಯಕ, ಸಹಾಯಕ ಇಂಜಿನಿಯರ್ ಎನ್.ಕೆ.ಹುಬ್ಬಳ್ಳಿ, ಗುತ್ತಿಗೆದಾರ ಎಸ್.ಕೆ.ಗಾಣಗೇರ, ಸಂಗಮೇಶ ಗೌಡರ, ಗ್ರಾಮಸ್ಥರಾದ ರಾಮಣ್ಣ ಬೇವಿನಮಟ್ಟಿ, ವಿಠ್ಠಲ್ ಗಾಣಿಗೇರ, ಶಿವಪ್ಪ ಇಲಾಳ, ಪರಸಪ್ಪ ಪಾಟೀಲ, ಕಿರಣ್ ಚಲವಾದಿ, ಶಿವಬಸಪ್ಪ ಗಾಣಿಗೇರ, ಅಂದಾನಪ್ಪ ಜಂಬಿಗಿ, ಲಕ್ಷ÷್ಮಣ ವೆಂಕಣ್ಣನವರ ಇತರರು ಇದ್ದರು.