ಭಟ್ಕಳ; ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಮಹ್ಮದ್ ರೋಷನ್ ಅವರ ಆದೇಶದಂತೆ ತಾಲೂಕಿನ ಮುರ್ಡೆಶ್ವರದ ಕೆರೆಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ 4 ಕೋಣೆಗಳನ್ನು ಶುಕ್ರವಾರ ಬೆಳಗ್ಗೆ ನೆಲಸಮಗೊಳಿಸಲಾಗಿದೆ.
ಸ್ಥಳೀಯರ ಆಕ್ಷೇಪ, ಪಾಲಕರ ವಿರೋಧದ ನಡುವೆಯೂ ಕರೊನಾ ಲಾಕ್ಡೌನ್ ಸಂದರ್ಭದ ಸದುಪಯೋಗ ಪಡೆದ ತಾಲೂಕಾಡಳಿತ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನೆಲಸಮಗೊಳಿಸಿತು.
1935ರಲ್ಲಿ ಸ್ಥಾಪನೆಗೊಂಡ ಈ ಶಾಲೆ ಮುರ್ಡೆಶ್ವರ ರಸ್ತೆಯಂಚಿನಲ್ಲಿ ಇದ್ದು 4 ಕೊಠಡಿಗಳನ್ನು ಹೊಂದಿತ್ತು. 1999-2000ರಲ್ಲಿ (2 ಕೊಠಡಿ), 2001-2002ರಲ್ಲಿ ಒಂದು ಹಾಗೂ ಮತ್ತೊಂದು ಕೊಠಡಿ 2012ರಲ್ಲಿ ನಿರ್ವಣವಾಗಿತ್ತು. ಸದರಿ ಕೊಠಡಿಗಳು ಅಪಾಯ ವಲಯದಲ್ಲಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ 142 ವಿದ್ಯಾರ್ಥಿಗಳು ಓದುತ್ತಿದ್ದು, 7 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾ ಕಟ್ಟಡ ತೆರವಿಗೆ ಪಾಲಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಫೆಬ್ರವರಿ ತಿಂಗಳಿನಲ್ಲಿ ಹಲವು ಸಭೆಗಳನ್ನು ನಡೆಸಿ ಮುರ್ಡೆಶ್ವರ ರಸ್ತೆ ವಿಸ್ತರಣೆ ಹೆಸರಿನಲ್ಲಿ ಬಡವರ ಅಂಗಡಿ ಹಾಗೂ ಬಡವರ ಮಕ್ಕಳು ಓದುತ್ತಿರುವ ಶಾಲೆಯನ್ನಷ್ಟೇ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ, ಶ್ರೀಮಂತರ ವಿಷಯದಲ್ಲಿ ಅಧಿಕಾರಿಗಳು ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಭೆಯಲ್ಲಿ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಶಾಲೆಯೊಂದಿಗೆ ಸ್ಥಳೀಯರಿಗೆ ಭಾವನಾತ್ಮಕ ಸಂಬಂಧ ಇದೆ. ಅದನ್ನು ತೆರವುಗೊಳಿಸುವುದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ವಿರೋಧ ತೋರಿದ್ದರು. ಆದರೆ, ಲಾಕ್ಡೌನ್ ಸನ್ನಿವೇಶವನ್ನು ಉಪಯೋಗಿಸಿಕೊಂಡ ತಾಲೂಕಾಡಳಿತ ಶುಕ್ರವಾರ ಮುಂಜಾನೆ ಸದ್ದಿಲ್ಲದೆ ಶಾಲೆ ನೆಲಸಮಗೊಳಿಸಿದೆ.
ಶಾಲೆಯ 4 ಕೊಠಡಿಗಳು ರಸ್ತೆಯ ಅಂಚಿನಲ್ಲಿದ್ದವು. ಅಲ್ಲದೆ, ಶಾಲೆಯ ಬಾಗಿಲಿಗೆ ಚರಂಡಿ ಹೊಂದಿಕೊಂಡಿದ್ದು, ಮಕ್ಕಳಿಗೆ ಇದರಿಂದ ಸಮಸ್ಯೆ ತಲೆದೋರಿತ್ತು. ಹಾಗಾಗಿ ಕೊಠಡಿಗಳನ್ನು ತೆರವುಗೊಳಿಸಿ ಹೊಸದಾಗಿ 6 ಕೊಠಡಿಗಳನ್ನು ನಿರ್ವಿುಸಲಾಗುವುದು. ಆರ್.ಎನ್. ಶೆಟ್ಟಿಯವರು ಈಗಾಗಲೇ 4 ಕೊಠಡಿಗಳನ್ನು ನಿರ್ವಿುಸಿಕೊಡುವ ಭರವಸೆ ನೀಡಿದ್ದಾರೆ. | ಎಂ.ಆರ್. ಮುಂಜಿ. ಕ್ಷೇತ್ರ ಶಿಕ್ಷಣಾಧಿಕಾರಿ