ಜಿಲ್ಲೆ

ಕೆರೆ ಹೂಳೆತ್ತುವ ಕಾರ್ಯ ಶ್ಲಾಘನೀಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮೆಚ್ಚುಗೆ, ವಿಶ್ವನಾಥಪುರ ಕೆರೆ ಹಸ್ತಾಂತರ

ಬೆಂಗಳೂರು: ಕೆರೆಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಕೆರೆಯ ಹೂಳೆತ್ತುವ ಮೂಲಕ ವಿಶ್ವನಾಥಪುರ ಕೆರೆ ಅಭಿವೃದ್ಧಿ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್,ವಿಶ್ವನಾಥಪುರ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ತಾಲೂಕು ವಿಶ್ವನಾಥಪುರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಮ್ಮೂರ - ನಮ್ಮ ಕೆರೆ ಯೋಜನೆಯಲ್ಲಿ ಪುನಶ್ಚೇತನಗೊಂಡ ವಿಶ್ವನಾಥಪುರ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆರೆ ಹೂಳೆತ್ತುವುದರಿಂದ ನೀರಿನ ಸಂಗ್ರಹ ಹೆಚ್ಚಾಗುತ್ತದೆ ಹಾಗೂ ಗ್ರಾಮದ ಸುತ್ತಮುತ್ತಲಿನ ಕೊಳವೆಬಾವಿಗಳ ಅಂತರ್ಜಲ ಮರುಪೂರಣಗೊಳ್ಳುತ್ತದೆ. ಕೆ.ಸಿ.ವ್ಯಾಲಿ ಹಾಗೂ ಎತ್ತಿನಹೊಳೆ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆಯ ಕ್ಯಾಚ್ ದಿ ರೈನ್ ಯೋಜನೆ ಮುಖ್ಯ ಉದ್ದೇಶ ಅಂತರ್ಜಲ ಮರುಪೂರಣಗೊಳಿಸುವುದು. ಮುಂದಿನ ದಿನಗಳಲ್ಲಿ ಸಂಘ-ಸಂಸ್ಥೆಗಳು ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಜಗದೀಶ.ಕೆ.ನಾಯಕ ಮಾತನಾಡಿ, ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಕೇವಲ ಹಣದಿಂದ ಅಳೆಯಲು ಸಾಧ್ಯವಿಲ್ಲ, ನಮ್ಮ ಪೂರ್ವಜರು ರಕ್ಷಿಸಿ, ಹೋದಂತಹ ಕೆರೆಗಳನ್ನು ಅಭಿವೃದ್ಧಿಪಡಿಸಿ, ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗಾಗಿ ಉಳಿಸುವ ಪ್ರಯತ್ನ ಮಾಡಬೇಕು. ಸಾರ್ವಜನಿಕರು ಸಹಕಾರ ನೀಡಿದಾಗ ಮಾತ್ರ ಇಂತಹ ಉತ್ತಮ ಕಾರ್ಯಕ್ರಮ ಮಾಡಲು ಸಾಧ್ಯ ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿ, 38 ವರ್ಷದಿಂದ ಸಂಘವು ರಾಜ್ಯಾದ್ಯಂತ ಸಮಾಜದ ಅಭಿವೃದ್ಧಿಗೆ ದುಡಿಯುತ್ತಿದೆ. 6.50 ಲಕ್ಷ ಸ್ವಸಹಾಯ ಸಂಘಗಳಿದ್ದು, 50 ಲಕ್ಷಕ್ಕೂ ಹೆಚ್ಚು ಕುಟುಂಬದ ಸದಸ್ಯರು ಹಣಕಾಸಿನ ನೆರವು ಪಡೆದುಕೊಂಡಿದ್ದಾರೆ ಎಂದರು.

ರಾಜ್ಯದ 338 ಕೆರೆಗಳ ಅಭಿವೃದ್ಧಿಗೆ 40 ಕೋಟಿ ರೂ.ಅನುದಾನ ನೀಡಲಾಗಿದೆ ಹಾಗೂ 15 ಲಕ್ಷ ರೂ.ವೆಚ್ಚದಲ್ಲಿ ವಿಶ್ವನಾಥಪುರ ಕೆರೆ ಅಭಿವೃದ್ಧಿ ಮಾಡಲಾಗಿದೆ ಎಂದು ತಿಳಿಸಿದರು.

ಪೂರ್ಣಕುಂಭದೊಂದಿಗೆ ಹಸ್ತಾಂತರ: ಬಿ.ಸಿ. ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಪೂರ್ಣ ಕುಂಭ ನೀಡುವ ಮೂಲಕ ಕೆರೆ ಹಸ್ತಾಂತರ ಮಾಡಲಾಯಿತು. ತಾಪಂ ಸದಸ್ಯೆ ಶೈಲಜಾ ಜಗದೀಶ್, ವಿಶ್ವನಾಥಪುರ ಗಾಪಂ ಅಧ್ಯಕ್ಷೆ ಮಂಗಳಾ ನಾರಾಯಣಸ್ವಾಮಿ, ಗ್ರಾಮ ಅಭಿವೃದ್ಧಿ ಉಪಾಧ್ಯಕ್ಷ ವಿನಯ್ ಕುಮಾರ್,ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ವಿ.ರಾಮಸ್ವಾಮಿ, ವಿಶ್ವನಾಥಪುರ ಕೆರೆ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಉಪ ತಹಸೀಲ್ದಾರ್ ಚೈತ್ರಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್‌ನಾಯಕ್ ಮತ್ತಿತರರು ಇದ್ದರು.

ಎಸ್‌ಕೆಡಿಆರ್‌ಡಿಪಿ ಯೋಜನೆಯಿಂದ ಹಲವಾರು ಕಾರ್ಯಕ್ರಮ ಆಯೋಜಿಸಿದ್ದು, ಇವುಗಳಿಂದ ಸಮಾಜಕ್ಕೆ ಅನುಕೂಲವಾಗಿದೆ, ಹಲವು ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುವ ಮೂಲಕ ಹಲವಾರು ಕುಟುಂಬದ ನೆಮ್ಮದಿಯಿಂದ ಜೀವನ ನಡೆಸಲು ಕಾರಣವಾಗಿದೆ. ಕೆ.ಸಿ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ