ಚಿಕ್ಕಮಗಳೂರು: ವೇದಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರೈತರು ಸಂಯಮ ಕಾಪಾಡಬೇಕು. ಜೊತೆಗೆ ಕೆರೆ ತುಂಬಿಸುವ ಯೋಜನೆಗೆ ಅಡ್ಡಿಪಡಿಸಬಾರದು ಎಂದು ಜಿಪಂ ಮಾಜಿ ಸದಸ್ಯ ಹಾಗೂ ಬಿಜೆಪಿ ರೈತ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಮನವಿ ಮಾಡಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಡೂರು ತಾಲೂಕು ಸಖರಾಯಪಟ್ಟಣ ಹೋಬಳಿ ಸದಾ ಕಾಲ ಬರಗಾಲಕ್ಕೆ ತುತ್ತಾಗುತ್ತದೆ. ಹೀಗಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿರುವ ನಾಗೇನಹಳ್ಳಿ, ಕಂಚುಗಾರನಹಳ್ಳಿ, ಹೊಸಳ್ಳಿ, ಹುಲಿಕೆರೆ ಗ್ರಾಮಗಳ ಜನರ ನೀರಿನ ಭವಣೆ ನೀಗಿಸಲು ೨೦೨೨ ರಲ್ಲಿ ನಾಗೇನಹಳ್ಳಿ ಕಟ್ಟೆ, ಬೆರಟಿಕೆರೆ ತುಂಬಿಸುವ ಯೋಜನೆಗೆ ಚಾಲನೆ ದೊರಕಿತ್ತು ಎಂದು ಹೇಳಿದರು.
ಈ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಅಯ್ಯನಕೆರೆ ತುಂಬಿ ಕೋಡಿಬಿದ್ದ ಹೆಚ್ಚುವರಿ ನೀರಿನಲ್ಲಿ ಅಲ್ಪಪ್ರಮಾಣದ ನೀರನ್ನು ಬಳಸಿಕೊಂಡು ಏತ ನೀರಾವರಿ ಮೂಲಕ ಕೆರೆ ತುಂಬಿಸುವ ಯೋಜನೆ ಇದಾಗಿದೆ. ೧೦೦ ಅಶ್ವಶಕ್ತಿ ಸಾಮರ್ಥ್ಯದ ಪಂಪ್‌ಸೆಟ್ ಬಳಸಿ ೯ ಇಂಚಿನ ಪೈಪ್ ಮೂಲಕ ೪೫ ದಿನಗಳು ಮಾತ್ರ ನೀರೆತ್ತುವ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಿದರು.
ಕೆರೆನೀರು ಕೋಡಿಬಿದ್ದಾಗ ಹರಿಯುವ ಪ್ರಮಾಣ ಪ್ರತಿ ಸೆಕೆಂಡಿಗೆ ೩,೫೦೦ ಲೀಟರ್ ಇದ್ದು, ಇದರಲ್ಲಿ ಸೆಕೆಂಡ್‌ಗೆ ಕೇವಲ ೨.೫ ಲೀಟರ್ ನೀರನ್ನು ಮಾತ್ರ ಈ ಯೋಜನೆಯಡಿ ಬಳಸಿಕೊಳ್ಳಲಾಗುತ್ತದೆ. ಇಷ್ಟು ನೀರು ಬಳಕೆ ಮಾಡುವುದರಿಂದ ನೀರಿನ ಹರಿವಿನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ ಎಂದು ತಿಳಿಸಿದರು.
ಈ ಕಾರಣದಿಂದ ವೇದಾ ನದಿಯ ದಡದ ಗ್ರಾಮಗಳ ಜನತೆಗೆ ಯಾವುದೇ ತೊಂದರೆಯಾಗುವುದಿಲ್ಲ. ಈಗಾಗಲೇ ಲಕ್ಯಾ ಹೋಬಳಿಯಲ್ಲಿ ೩ ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿದ್ದು, ದಾಸರಹಳ್ಳಿ-ಲಕ್ಯಾದ ಮಾದರಸನ ಕೆರೆ ಮತ್ತು ಕರಗಡ ಯೋಜನೆಯಲ್ಲಿ ಬೆಳವಾಡಿ ಮತ್ತು ದೇವನೂರು ಕೆರೆಗಳಿಂದ ಕೋಡಿಬಿದ್ದ ನೀರು ವೇದಾ ನದಿಗೆ ಸೇರಲಿದೆ ಎಂದು ವಿವರಿಸಿದರು.
ರಣಘಟ್ಟ ಯೋಜನೆಯಲ್ಲಿ ಹಳೇಬೀಡು ಮತ್ತು ಬೆಳವಾಡಿ ಕೆರೆಗೆ ನೀರು ಹರಿಸುವ ಯೋಜನೆಯು ಒಂದು ವರ್ಷದಲ್ಲಿ ಮುಗಿಯಲಿದ್ದು, ಆ ನೀರು ಸಹ ವೇದಾ ನದಿಗೆ ಸೇರಲಿದೆ. ಎತ್ತಿನಹೊಳೆ ಯೋಜನೆಯ ಹೆಚ್ಚುವರಿ ನೀರು ವೇದ ನದಿಗೆ ಸೇರಿ ಈ ಎಲ್ಲಾ ಯೋಜನೆಗಳು ಕಾವೇರಿ ನದಿ ಪ್ರಾಂತ್ಯದ ಕೃಷ್ಣಾ ನದಿ ಪಾತ್ರಕ್ಕೆ ಹೆಚ್ಚುವರಿಯಾಗಿ ಹರಿಯಲಿದೆ ಎಂದರು.
ಸಖರಾಯಪಟ್ಟಣ ಭಾಗದಿಂದ ಕೂಗಳತೆ ದೂರದಲ್ಲಿ ಅಯ್ಯನಕೆರೆ ಇದ್ದರೂ ಅಲ್ಲಿ ಬಿದ್ದ ನೀರು ವಾಣಿವಿಲಾಸ ಸಾಗರಕ್ಕೆ ಸೇರುತ್ತಿದೆ. ಈ ನೀರನ್ನು ಬಳಸಿಕೊಳ್ಳುವಲ್ಲಿ ರೈತರು ವಿಫಲರಾಗಿದ್ದಾರೆ. ಕೇವಲ ಊಹಾ ಪೋಹಗಳಿಗೆ, ಸುಳ್ಳು ವದಂತಿಗಳಿಗೆ ರೈತರು ಕಿವಿಕೊಡಬಾರದು ಎಂದು ತಿಳಿಸಿದರು.
ಈ ಎಲ್ಲಾ ಯೋಜನೆಗಳಡಿ ಅಯ್ಯನಕೆರೆಗೂ ಮುಂದಿನ ದಿನಗಳಲ್ಲಿ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ. ಸದಾ ಕಾಲ ತುಂಬಿ ಹರಿಯುವ ನೀರಿನಿಂದ ಬೊಗಸೆ ನೀರನ್ನು ಬಳಕೆ ಮಾಡಿಕೊಳ್ಳುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಯಾವ ಸೇನೆಯೂ ಬೀದಿಗಿಳಿಯುವ ಅಗತ್ಯ ಇಲ್ಲ. ರೈತರ ಸಮಸ್ಯೆಯ ಅರಿವಿದ್ದರೆ ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಿ ಜನಪ್ರತಿನಿಧಿಗಳು ಹಾಗೂ ರೈತರ ಸಭೆ ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ರುದ್ರಮೂರ್ತಿ, ಮುಖಂಡರಾದ ಅಣ್ಣಾ ನಾಯಕ್, ವಸಂತ ಕುಮಾರ್, ವಿಜಯ್ ಕುಮಾರ್ ಮತ್ತಿತರರಿದ್ದರು.