ಜಿಲ್ಲೆ

ಕೆರೆ ಜಾಗ ಒತ್ತುವರಿ ತೆರವಿಗೆ ಕ್ರಮ

ಸಾಗರ: ಬೆಂಗಳೂರಿನ ಸರ್ವೆ ಇಲಾಖೆಯಿಂದ ತಜ್ಞರ ತಂಡ ಒಂದು ವಾರದಲ್ಲಿ ಸಾಗರಕ್ಕೆ ಬರಲಿದೆ. ಗಣಪತಿ ಕೆರೆಯನ್ನು ಸಾರ್ವಜನಿಕರು, ಹಿರಿಯರು ಹಾಗೂ ಪರಿಸರ ಪ್ರೇಮಿಗಳ ಸಮ್ಮುಖದಲ್ಲಿ ಸರ್ವೆ ನಡೆಸಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ನಗರದ ಗಣಪತಿ ಕೆರೆ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ 80 ಲಕ್ಷ ರೂ. ವೆಚ್ಚದ ಮಿನಿ ಸೇತುವೆ ನಿರ್ವಿುಸುವ ಸ್ಥಳ ಪರಿಶೀಲಿಸಿ ಮಾತನಾಡಿ, ಕೆರೆ ಸರ್ವೆ ಪಾರದರ್ಶಕವಾಗಿ ನಡೆಸುವ ಜತೆಗೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗಣಪತಿ ಕೆರೆಯ ಒಂದು ಭಾಗದಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ಚರಂಡಿ ಕಾಮಗಾರಿ ಕೈಗೊಂಡಿದ್ದು, ಇನ್ನೊಂದು ಭಾಗದಲ್ಲೂ ಚರಂಡಿ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದೆ. ಕೆರೆಗೆ ಕಲುಷಿತ ನೀರು ಸೇರಬಾರದೆನ್ನುವ ಉದ್ದೇಶದಿಂದ ಎರಡೂ ಕಡೆ ಚರಂಡಿ ನಿರ್ವಿುಸಿ ಕೆರೆ ನೀರನ್ನು ಶುದ್ಧವಾಗಿರಿಸುವ ಪ್ರಯತ್ನ ನಡೆದಿದೆ ಎಂದರು.

ಕೆರೆಗೆ ಹರಿದು ಬರುವ ಕೊಳಚೆ ನೀರು ಹೊರಗೆ ಹರಿದು ಹೋಗಲು ಕೆರೆಕೋಡಿ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕ ಮತ್ತು ಶಂಕರಮಠದ ಪಕ್ಕ ಕೆರೆ ಜಾಗದಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಗಣಪತಿ ದೇವಸ್ಥಾನದ ಪಕ್ಕದಲ್ಲಿ ಕೆರೆಗೆ ಇಳಿಯುವ ಜಾಗಕ್ಕೆ ಸುರಕ್ಷತೆ ದೃಷ್ಟಿಯಿಂದ ಗ್ರಿಲ್ ಅಳವಡಿಸಲಾಗುತ್ತಿದೆ. ಮೆಟ್ಟಿಲು ನಿರ್ವಿುಸಲಾಗುತ್ತಿದೆ. 30 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ, ಅಭಿಯಂತರಾದ ರಾಜೇಶ್, ವಿಠ್ಠಲ್ ಹೆಗಡೆ, ಬಿಜೆಪಿ ಪ್ರಮುಖರಾದ ಟಿ.ಡಿ.ಮೇಘರಾಜ್, ಕೆ.ಆರ್.ಗಣೇಶ್ ಪ್ರಸಾದ್, ಲೋಕನಾಥ್ ಬಿಳಿಸಿರಿ, ಬಿ.ಟಿ.ರವೀಂದ್ರ, ಗಿರೀಶ್ ಗೌಡ ಇದ್ದರು.