ಕಲಬುರಗಿ: ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಬೆಳೆ ಸೇರಿ ಅಪಾರ ಪ್ರಮಾಣದ ಆಸ್ತಿ ಹಾನಿಗೊಳಗಾಗಿದೆ. ಕೆರೆ ಕಟ್ಟೆಗಳು ಭರ್ತಿಯಾಗಿ, ಸೇತುವೆಗಳು ಜಲಾವೃತಗೊಂಡು ಪ್ರಮುಖ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ.
ಕಾಗಿಣಾ ನದಿ ಉಕ್ಕಿ ಹರಿದು ಮಳಖೇಡ ಬಳಿಯ ಸೇತುವೆ ಮುಳುಗಡೆಯಾಗಿದೆ. ಚಿತ್ತಾಪುರ ತಾಲೂಕು ದಂಡೋತಿ ಬಳಿಯ ಸೇತುವೆ ಮುಳುಗಡೆಯಾಗಿದೆ. ಮನೆ, ದೇವಾಲಯಗಳು ಮುಳುಗಡೆಯಾಗಿವೆ. ಚಿಂಚೋಳಿ ತಾಲೂಕಿನ ಹಸರಗುಂಡಿ, ಪೋಲಕಪಲ್ಲಿ, ಚೇಂಗಟಾ, ದೇಗಲ್ಮಡಿ, ಚಿಕ್ಕನಿಂಗದಳ್ಳಿ ಸೇರಿ ಅನೇಕ ಗ್ರಾಮಗಳಿಗೆ ನೀರು ನುಗ್ಗಿದೆ.
ಕಲಬುರಗಿ ಮಹಾನಗರದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನಾಲಿಗಳು ಭರ್ತಿಯಾಗಿ ಮಳೆ ನೀರು ರಸ್ತೆ ನುಗ್ಗಿದೆ. ಹಳೆಯ ಜೇವರ್ಗಿ ರಸ್ತೆಯಲ್ಲಿನ ಕೆಳಸೇತುವೆಯಲ್ಲಿ ನೀರು ನಿಲುಗಡೆಯಿಂದ ಜನ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ವಿಸ್ತರಣಾ ಬಡಾವಣೆಯಲ್ಲಿ ಅನೇಕ ಮನೆಗಳು ಜಲಾವೃತಗೊಂಡಿವೆ.
ಮಳೆ ವಿವರ ಕಲಬುರಗಿ ನಗರದಲ್ಲಿ ಕಳೆದ 24 ಗಂಟೆಯಲ್ಲಿ 6 ಮಿ.ಮೀ ಸಾಮಾನ್ಯ ಮಳೆ ಇದ್ದರೆ, 13 ಮಿ.ಮೀ ಮಳೆ ಸುರಿದಿದೆ. ಕಳೆದೊಂದು ವಾರದಲ್ಲಿ ಸಾಮಾನ್ಯ ಮಳೆ 36 ಮಿ.ಮೀ ಇದ್ದರೆ 93 ಮಿ.ಮೀ ಸುರಿದಿದೆ. ಈ ತಿಂಗಳು 1ರಿಂದ 16ರವರೆಗೆ ಸಾಮಾನ್ಯ ಮಳೆ 86 ಮಿ.ಮೀ ಇದ್ದರೆ 124 ಮಿ.ಮೀ ಬಿದ್ದಿದೆ. ಜೂನ್ನಿಂದ ಸೆಪ್ಟೆಂಬರ್ 16ವರೆಗೆ ಸಾಮಾನ್ಯ ಮಳೆ 487 ಮಿ.ಮೀ ಇದ್ದರೆ 676 ಮಿ.ಮೀ ಸುರಿದಿದೆ.