ಜಿಲ್ಲೆ

ಕೆರೆ ಒತ್ತುವರಿ ತೆರವು ಮಾಹಿತಿ ಕೊಡಿ

ಶಿವಮೊಗ್ಗ: ಜಿಲ್ಲೆಯ 2,526 ಕೆರೆಗಳ ಸರ್ವೆ, ಒತ್ತುವರಿ ಗುರುತಿಸಿ ತೆರವಿಗೆ ಕೈಗೊಂಡಿರುವ ಕ್ರಮಗಳ ಕುರಿತು ಆಗಸ್ಟ್ 18 ರೊಳಗೆ ವರದಿ ನೀಡುವಂತೆ ಎಲ್ಲ ತಹಸೀಲ್ದಾರ್​ಗಳಿಗೆ ಲೋಕಾಯುಕ್ತ ವಿಶ್ವನಾಥ ಶೆಟ್ಟಿ ನೋಟಿಸ್ ಜಾರಿ ಮಾಡಿದ್ದಾರೆ.

ಈ ಹಿಂದೆ ವರದಿ ನೀಡಲು ಏಪ್ರಿಲ್ 24ರ ಗಡುವು ವಿಧಿಸಲಾಗಿತ್ತು. ಆದರೆ ಲಾಕ್​ಡೌನ್​ನಿಂದ ಅಂತಿಮ ಅವಧಿ ವಿಸ್ತರಿಸಿದ್ದು ನಿಗದಿತ ಸಮಯದಲ್ಲಿ ವರದಿ ನೀಡುವಂತೆ ತಿಳಿಸಲಾಗಿದೆ. ಜಿಲ್ಲೆಯ ಕೆರೆಗಳ ಒತ್ತುವರಿ ಬಗ್ಗೆ ಲೋಕಾಯುಕ್ತರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದರು. ಈವರೆಗೆ ಹಲವು ಬಾರಿ ಕೆರೆ ಒತ್ತುವರಿ ತೆರವಿಗೆ ಸಂಬಂಧಿಸಿ ಸಭೆಗಳು ನಡೆದಿವೆ. ಜಿಲ್ಲಾಧಿಕಾರಿ ಹಂತದಲ್ಲಿ ಹಲವು ಸೂಚನೆ ರವಾನೆಯಾಗಿವೆ. ಆದರೆ ಅಧಿಕಾರಿಗಳು ಮಾತ್ರ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಲೋಕಾಯುಕ್ತರೇ ಈ ವಿಷಯದಲ್ಲಿ ಮುತುವರ್ಜಿ ತೋರಿರುವುದರಿಂದ ವಿಷಯ ಗಂಭೀರತೆ ಪಡೆದುಕೊಂಡಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಕಬಳಿಕೆ: ಮೂರು ವರ್ಷಗಳ ಹಿಂದೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರ್ವೆಯಾಗಿರುವ 66 ಕೆರೆಗಳ ಒಟ್ಟು ವಿಸ್ತೀರ್ಣ 479 ಎಕರೆ. ಈ ಪೈಕಿ 93.87 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿದೆ. ಈ ಭೂಮಿಯ ಇಂದಿನ ಮಾರುಕಟ್ಟೆ ಮೌಲ್ಯ ನೂರಾರು ಕೋಟಿ ರೂಪಾಯಿ. ಹರಿಗೆ ಸರ್ವೆ ನಂ. 14ರ 115.14 ಎಕರೆ ಪ್ರದೇಶದಲ್ಲಿರುವ ವಿಸ್ತಾರವಾದ ಕೆರೆಯೂ ಒತ್ತುವರಿಯಾಗಿದೆ. ಆದರೆ ಇದರ ನಿರ್ದಿಷ್ಟ ಸರ್ವೆಗೆ ಅಗತ್ಯವಾದ ನಕ್ಷೆಯೇ ಜಿಲ್ಲಾಡಳಿತದ ಬಳಿಯಿಲ್ಲ.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನೂ 42 ಕೆರೆಗಳ ಸರ್ವೆ ಕಾರ್ಯ ಬಾಕಿಯಿದೆ. ಸರ್ವೆ ಬಳಿಕ ಪಾಲಿಕೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಕೆರೆಗಳ ಒಟ್ಟು ವಿಸ್ತೀರ್ಣ ಅಂತಿಮವಾಗಲಿದೆ. ವಿಶೇಷವೆಂದರೆ ಕೆಲ ಕೆರೆಗಳು ಸಂಪೂರ್ಣ ಒತ್ತವರಿಯಾಗಿದೆ. ಗೋಪಶೆಟ್ಟಿ ಸರ್ವೆ ನಂ 35ರಲ್ಲಿ 4.11 ಎಕರೆ ಸರ್ಕಾರಿ ಕೆರೆ ಈಗ ಸಂಪೂರ್ಣ ಗದ್ದೆ, ತೋಟವಾಗಿ ಪರಿವರ್ತನೆಯಾಗಿದೆ.

ಮಾಲೀಕತ್ವದ ಸಮಸ್ಯೆ: ಕೆರೆಗಳ ಒತ್ತುವರಿ ಗುರುತಿಸುವ ಮುನ್ನ ಅದರ ಮಾಲೀಕತ್ವ ಗುರುತಿಸುವುದು ಮುಖ್ಯ. ಒತ್ತುವರಿ ತೆರವು ವೇಳೆ ಅತಿಕ್ರಮಣದಾರರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರೆ ಆಗ ನಿಜವಾದ ಹಕ್ಕುದಾರರೇ ನ್ಯಾಯಾಲಯದಲ್ಲಿ ಹಕ್ಕು ಪ್ರತಿಪಾದಿಸಬೇಕಾಗುತ್ತದೆ. ಇಲ್ಲದಿದ್ದರೆ ಎಲ್ಲ್ಲ ಪ್ರಯತ್ನ ವಿಫಲವಾಗಲಿದೆ. ಹೀಗಾಗಿ ಮೊದಲು ಮಾಲೀಕತ್ವ ಗುರುತಿಸುವ ಕೆಲಸವಾಗಬೇಕಿದೆ.

ಇನ್ನು ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳ ಪೈಕಿ ಎಷ್ಟು ಕೆರೆಗಳಿಗೆ ಪಾಲಿಕೆಯ ಮಾಲೀಕತ್ವ ಇದೆ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಬೇಕಿದೆ. ಜಿಪಂ, ಸಣ್ಣ ನೀರಾವರಿ ಇಲಾಖೆಗಳ ವ್ಯಾಪ್ತಿಯ ಕೆರೆಗಳನ್ನು ಗುರುತಿಸಬೇಕಿದೆ. ಈ ಕಾರ್ಯ ನಡೆಯದೇ ಸರ್ವೆ ನಡೆಸಿ ಒತ್ತುವರಿ ತೆರವು ಅಸಾಧ್ಯ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಾಗುವಳಿ ತೆರವು ಕಷ್ಟ: ಬಹಳಷ್ಟು ಕಡೆಗಳಲ್ಲಿ ಕೆರೆ ಒತ್ತುವರಿಯಾದ ಜಾಗದಲ್ಲಿ ಜನರು ಸಾಗುವಳಿ ಮಾಡಿಕೊಂಡಿದ್ದಾರೆ. ಸಾಗುವಳಿ ಭೂಮಿ ತೆರವು ಕಷ್ಟ ಸಾಧ್ಯ. ಜಿಲ್ಲಾಡಳಿತ ತೆರವಿಗೆ ಮುಂದಾದರೆ ಅನೇಕ ಸಮಸ್ಯೆ ಎದುರಿಸಬೇಕಾಗುತ್ತಿದೆ. ರಾಜಕೀಯ ಒತ್ತಡದಿಂದ ಆರಂಭವಾಗಿ ಕಾನೂನಾತ್ಮಕ ತೊಡಕಗಳು ಉದ್ಭವಿಸುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗೆ ಹೆಚ್ಚು ವೇಗ ಸಿಗುತ್ತಿಲ್ಲ.

ಒತ್ತುವರಿಗಿದೆ ಕಠಿಣ ಶಿಕ್ಷೆ: ಕೆರೆಯ ವ್ಯಾಪ್ತಿಯಲ್ಲಿ ಯಾವುದಾದರೂ ನಿರ್ಮಾಣ ಕಾಮಗಾರಿ ಮಾಡಿದ್ದರೆ, ಬೆಳೆಗಳನ್ನು ಬೆಳೆದಿದ್ದರೆ ನೋಟಿಸ್ ತಲುಪಿದ 30 ದಿನದೊಳಗೆ ಅದನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪ್ರಾಧಿಕಾರವೇ ಸ್ವಯಂ ಪ್ರೇರಿತವಾಗಿ ಅದನ್ನು ತೆರವುಗೊಳಿಸಲಿದೆ. ಅದರ ವೆಚ್ಚವನ್ನು ಒತ್ತುವರಿದಾರರೇ ಭರಿಸಬೇಕಾಗುತ್ತದೆ. ನಿಷೇಧಿತ ಚಟುವಟಿಕೆ ನಡೆಸಿದವರಿಗೆ ಕನಿಷ್ಠ ಆರು ತಿಂಗಳು, ಗರಿಷ್ಠ ಎರಡು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಒತ್ತುವರಿ ತೆರವಿಗೆ ಮುಂದಾಗುವ ಪ್ರಾಧಿಕಾರದ ಅಧಿಕಾರಿಯ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದರೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಯೇ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಪ್ರತಿ ತಿಂಗಳು ಇಂತಿಷ್ಟು ಕೆರೆ ಒತ್ತುವರಿ ತೆರವುಗೊಳಿಸಲು ಗುರಿ ನಿಗದಿಪಡಿಸಲಾಗಿದೆ. ಸರ್ವೆ ಕಾರ್ಯವೂ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕೆರೆಗಳಿರುವುದರಿಂದ ದೊಡ್ಡ ಪ್ರಮಾಣದಲ್ಲಿ ತೆರವು ಫಲಿತಾಂಶ ಸಿಗುತ್ತಿಲ್ಲ. ಹಲವೆಡೆ ನಮಗೆ ಕಾನೂನಾತ್ಮಕ ತೊಡಕುಗಳು ಎದುರಾಗುತ್ತಿವೆ.

| ಕೆ.ಬಿ.ಶಿವಕುಮಾರ್, ಡಿಸಿ

ಶಿವಮೊಗ್ಗ ಪಾಲಿಕೆ ಹಾಗೂ ತಾಲೂಕಿನಲ್ಲಿ ಎಷ್ಟು ಕೆರೆಗಳು ಯಾರ ಮಾಲೀಕತ್ವದಲ್ಲಿ ಇದೆ ಎಂಬ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದೇನೆ. ಸರ್ವೆ ನಡೆಸಿ ಕೆರೆ ಒತ್ತುವರಿ ತೆರವಿನ ಬಗ್ಗೆ ವರದಿ ನೀಡುವಂತೆ ಲೋಕಾಯುಕ್ತರ ನೋಟಿಸ್ ಇಂದು ನನಗೆ ಸಿಕ್ಕಿದೆ. ನಿಗದಿತ ಸಮಯದಲ್ಲಿ ಲೋಕಾಯುಕ್ತಕ್ಕೆ ವರದಿ ನೀಡಲಾಗುವುದು.

| ಎನ್.ಜೆ.ನಾಗರಾಜ್, ತಹಸೀಲ್ದಾರ್, ಶಿವಮೊಗ್ಗ