ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ಕಲ್ಗುಂಡಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ 1.50 ಕೋಟಿ ರೂ. ವೆಚ್ಚದಲ್ಲಿ ಕಲ್ಗುಂಡಿ ಗ್ರಾಮದ ಊರ ಮುಂದಿನ ಕೆರೆಯ ಏರಿ, ಕೋಡಿ ಮತ್ತು ಕಾಲುವೆಯ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ಶುಕ್ರವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಈ ಗ್ರಾಮದ ಕೆರೆಯು ಸುತ್ತ ಮತ್ತಲಿನ ಹತ್ತಾರು ಗ್ರಾಮಗಳ ರೈತರ ಜಮೀನುಗಳಿಗೆ ಆಸರೆಯಾಗಿದ್ದು, ಬಹಳ ಹಳೆಯ ಕೆರೆಯಾಗಿರುತ್ತದೆ. ಶಿಥಿಲಗೊಂಡಿದ್ದು, ನೀರು ಸಂಗ್ರಹವಾಗದೆ ಸೋರಿಕೆಯಾಗುತ್ತಿತ್ತು. ಅಲ್ಲದೆ ಇದಕ್ಕೆ ಬರುವ ಜಲಮೂಲದ ಕಾಲುವೆಗಳು ಮುಚ್ಚಿ ಹೋಗಿವೆ. ಆದ್ದರಿಂದ ಈ ಕೆರೆಯ ಏರಿ, ಕೋಡಿ ಮತ್ತು ಕಾಲುವೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ.
ಸರ್ಕಾರ ಕೇವಲ ಗ್ಯಾರಂಟಿ ಗಳನ್ನು ಮಾತ್ರ ನೀಡುತ್ತಿಲ್ಲ.ಇಂತಹ ಅವಶ್ಯಕ ಕಾಮಗಾರಿಗಳಿಗೆ ಅನುದಾನ ನೀಡುತ್ತಿದೆ. ವಿರೋಧ ಪಕ್ಷದವರು ನಮ್ಮ ಅಭಿವೃದ್ಧಿ ಸಹಿಸದೆ ಸುಖಾ ಸುಮ್ಮನೆ ಆರೋಪ ಮಾಡುತ್ತರೆ. ಜನಗಳು ತಲೆ ಕೆಡಿಸಿಕೊಳ್ಳದೆ ಅಭಿವೃದ್ದಿಗೆ ಸಹಕರಿಸಿ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಗೊಲ್ಲರಹಳ್ಳಿ ಹನುಮಪ್ಪ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲೂ ನಮ್ಮ ಶಾಸಕರ ಕೊಡುಗೆ ಇರುವುದರಿಂದ ಅವರ ನಾಲ್ಕು ಬಾರಿ ಗೆದ್ದು ಆರಿಸಿ ಬಂದಿರುವುದು ತಮ್ಮ ಅಭಿವೃದ್ಧಿ ಕಾರ್ಯವೇ ಶ್ರೀರಕ್ಷೆಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಾಲೆಹಳ್ಳಿ ಕಲ್ಲೇಶಪ್ಪ, ಗ್ರಾ.ಪಂ. ಅಧ್ಯಕ್ಷೆ ಸಫಿನಾ ಬಾನು, ಸದಸ್ಯರಾದ ಕೊಟ್ರೇಶ್, ರಮೇಶ್, ಶಿವಣ್ಣ, ಗ್ರಾಮಸ್ಥರಾದ ಶ್ಯಾಮಣ್ಣ, ಮಾಡಾಳು ಗ್ರಾ.ಪಂ.ಅಧ್ಯಕ್ಷ ಯೋಗೀಶ್, ಎ.ಇ.ಇ ಸುಂದರರಾಜ, ಗುತ್ತಿಗೆದಾರ ಶ್ರೀನಿವಾಸ್ ಇತರರಿದ್ದರು.