ಶೃಂಗೇರಿ: ಶಾಸಕ ಸಿ.ಟಿ.ರವಿ ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನ ಕೆರೆಗಳ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಇಂಥವರು ಮುತ್ಸದ್ದಿ ರಾಜಕಾರಣಿ ಸಿದ್ದರಾಮಯ್ಯ ಅವರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಸಿದ್ದರಾಮಯ್ಯ ಅವರಿಗೆ ರಾಜಕಾರಣದಲ್ಲಿ 40 ವರ್ಷಗಳ ಅನುಭವವಿದೆ. ಮುಖ್ಯಮಂತ್ರಿಯಾಗಿ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಅವರ ಕುರಿತು ಅವಹೇಳನಾಕಾರಿ ಮಾತುಗಳನ್ನಾಡಿ ಬಿಜೆಪಿ ಸಂಸ್ಕೃತಿ ಹೇಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದೀರಿ ಎಂದು ಶಾಸಕ ಟಿ.ಡಿ.ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.